ಕೊಪ್ಪಳ: ಸಾರ್ವಜನಿಕರ ಸಹಭಾಗಿತ್ವದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೈಗೊಂಡಿರುವ ತಾಲೂಕಿನ ಗಿಣಗೇರಿ ಕೆರೆ ಅಭಿವೃದ್ಧಿಗೆ ವೈಯಕ್ತಿಕವಾಗಿ ತಮ್ಮ ಸಂಬಳದಿಂದ 10 ಲಕ್ಷ ರೂಪಾಯಿ ನೀಡುವುದಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಭರವಸೆ ನೀಡಿದ್ದಾರೆ.
ಗವಿಸಿದ್ದೇಶ್ವರ ಶ್ರೀಗಳು ನಮಗೆ ನಡೆದಾಡುವ ದೇವರು: ಶಾಸಕ ರಾಘವೇಂದ್ರ ಹಿಟ್ನಾಳ್
ನಾವು ದೇವರನ್ನು ನೋಡಿಲ್ಲ. ಆದರೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನಮಗೆ ನಡೆದಾಡುವ ದೇವರು ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ಗಿಣಗೇರಿ ಕೆರೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ 24 ಕಿಲೋ ಮೀಟರ್ ಉದ್ದದ ಹಿರೇಹಳ್ಳ ಸ್ವಚ್ಛಗೊಳಿಸಿ ಕಾಯಕಲ್ಪ ನೀಡಿದ್ದಾರೆ. ಅಲ್ಲೀಗ ಸರ್ಕಾರದಿಂದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಸಮಾಜಮುಖಿ ಕೆಲಸಗಳಿಂದ ಶ್ರೀಗಳು ನಡೆದಾಡುವ ದೇವರೆನಿಸಿದ್ದಾರೆ. ಈ ವರ್ಷ ಕೊರೊನಾ ಕಾರಣದಿಂದ ಜಾತ್ರೆಯನ್ನು ಸರಳವಾಗಿ ಆಚರಿಸಿ ಮೂರು ಮಹತ್ವದ ಕೆಲಸಗಳಿಗೆ ಕೈ ಹಾಕಿದ್ದಾರೆ.
ಈಗಾಗಲೇ ಕೆರೆ ತುಂಬಿಸುವ ಯೋಜನೆಯಲ್ಲಿ ಈ ಗಿಣಗೇರೆ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಕೆಲಸ ಕಾರ್ಯ ನಡೆದಿದೆ. ಕೆರೆ ಸಂಪೂರ್ಣವಾಗಿ ಅಭಿವೃದ್ಧಿಯಾದರೆ ವರ್ಷಪೂರ್ತಿ ಕೆರೆಯಲ್ಲಿ ನೀರು ತುಂಬಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.