ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಭೀತಿ ಆರಂಭವಾಗಿದೆ. ಪಾಸಿಟಿವ್ ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ, ಸಾರ್ವಜನಿಕರು ಎಚ್ಚರಿಕೆ ವಹಿಸುವುದರ ಜತೆಗೆ ಜನಸಂದಣಿ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿವೆ. ಎರಡನೇ ಅಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಸುಮಾರು 70 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹೀಗಾಗಿ, ಜನರು ಎಚ್ಚರಿಕೆವಹಿಸಬೇಕು.
ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಸೇರಿ ಸಾಮಾಜಿಕ ಅಂತರ ಕಾಪಾಡುವುದು ಬಹು ಮುಖ್ಯವಾಗಿದೆ. ಜನರು ಗುಂಪು ಗುಂಪಾಗಿ ಸೇರುವುದನ್ನು ಬಿಡಬೇಕು. ಈ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಕೊರೊನಾ ಪಾಸಿಟಿವ್ ಹರಡುವಿಕೆ ಕಡಿಮೆ ಮಾಡಬಹುದು ಎಂದರು.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಮತ್ತೆ ಕೊರೊನಾ ಅಬ್ಬರ: 7 ವಿದ್ಯಾರ್ಥಿಗಳು, 5 ಶಿಕ್ಷಕರಿಗೆ ಪಾಸಿಟಿವ್
ಇನ್ನು, ಒಳಾಂಗಣ ಕಾರ್ಯಕ್ರಮ ಕುರಿತು ಈಗಾಗಲೇ ಸಂಬಂಧಿಸಿದ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಸುತ್ತೋಲೆಯ ಪ್ರಕಾರ ಜಾತ್ರೆ, ಉತ್ಸವಗಳನ್ನು ನಡೆಸದಂತೆ ಆದೇಶಿಸಲಾಗಿದೆ. ಜನರು ಸಹಕರಿಸುವ ಮೂಲಕ ಕೊರೊನಾ ಹರಡುವಿಕೆ ತಡೆಗಟ್ಟುವಂತೆ ಡಿಸಿ ಮನವಿ ಮಾಡಿದ್ದಾರೆ.