ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ(Kannada Sahitya parishad election) ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ(MLA Paranna munavalli) ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗಂಟೆಗೊಮ್ಮೆ ತಮ್ಮ ನಿಲುವು ಬದಲಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಶಾಸಕ, ಮಾಜಿ ಸಚಿವರಿಂದ ಗಂಟೆಗೊಮ್ಮೆ ನಿರ್ಣಯ ಕಸಾಪದ ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ ಜೋಶಿಯನ್ನು ಬೆಂಬಲಿಸಬೇಕು ಎಂದು ಸ್ವತಃ ಬಿಜೆಪಿ ಪಕ್ಷ ನಿರ್ಣಯ ಕೈಗೊಂಡ ಹಿನ್ನೆಲೆ ಮೊದಲ ಬಾರಿಗೆ ಬಹಿರಂಗವಾಗಿಯೇ ಜೋಶಿ ಪರವಾಗಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ ನೀಡಿದ್ದರು.
ಆದರೆ, ಬಳಿಕ ಕೇಂದ್ರ ಕಸಾಪಕ್ಕೆ ಸ್ಪರ್ಧಿಸಿರುವ ಮತ್ತೊಬ್ಬ ಅಕಾಂಕ್ಷಿ ಶೇಖರಗೌಡ ಪಾಟೀಲ್ ಬಣದವರು ಶಾಸಕರ ಬಳಿ ತೆರಳಿ ಮನವೊಲಿಸಿದ ಬಳಿಕ ಶಾಸಕ ಪರಣ್ಣ, ಶೇಖರಗೌಡ ಅವರಿಗೆ ಮತ ನೀಡುವಂತೆ ಹೇಳಿಕೆ ನೀಡಿ ಗೊಂದಲಕ್ಕೆ ಕಾರಣವಾಗಿದ್ದಾರೆ.
ಇತ್ತ ಮಾಜಿ ಸಚಿವ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಕೂಡ ಮೊದಲಿಗೆ ಮಹೇಶ ಜೋಶಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.
ಆದರೆ, ಬಳಿಕ ಕೊಪ್ಪಳ ಜಿಲ್ಲೆಯವರೇ ಆದ ಶೇಖರಗೌಡ ಮತ್ತು ಶರಣೇಗೌಡಗೆ ಮತ ನೀಡುವಂತೆ ಗಂಟೆಗೊಮ್ಮೆ ತಮ್ಮ ನಿಲುವು ಬದಲಿಸಿ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದಾರೆ.