ಕೊಪ್ಪಳ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರ ಪರ ಯೋಜನೆಗಳನ್ನು ರೂಪಿಸುತ್ತಿವೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಯೋಚನಾ ಶಕ್ತಿ ಪಡೆದಿದ್ದಾರೆ. ಮಹಿಳೆಯರ ಧ್ವನಿಗೆ ಬಲ ಬಂದಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (ಭಾರತ ಸರ್ಕಾರ)ದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲೆಯ ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆಯ ಪಕ್ಕದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2023ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ತ್ರೀ ಶಕ್ತಿ ಸಂಘಗಳ ಕಲ್ಪನೆ ನೀಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡ ಕನಸು ಇಂದು ನನಸಾಗುತ್ತಿದೆ ಎಂಬುದಕ್ಕೆ ಇಂದು ಸ್ವಸಹಾಯ ಸಂಘಗಳಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮಹಿಳೆಯರೇ ಸಾಕ್ಷಿ ಎಂದರು.
ಮಹಿಳೆ ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ, ಜನಿಸುವ ಮಗುವಿಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ರೂಪಿಸಿದೆ. ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇನ್ನಿತರ ಜನಪರ ಯೋಜನೆ ಜಾರಿ ಮಾಡಿ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ ಕಾರ್ಯಕ್ರಮ ಇದಾಗಿದೆ. ಮಹಿಳಾ ಒಗ್ಗಟ್ಟನ್ನು ಕಂಡು ಸಂತಸವಾಗಿದೆ. ದೇಶದಲ್ಲಿ ಹಲವಾರು ದಶಕಗಳಿಂದ ಆಗದೇ ಇರುವ ಕಾರ್ಯಗಳು ನರೇಂದ್ರ ಮೋದಿಯವರು ಆಡಳಿತ ಚುಕ್ಕಾಣಿ ಹಿಡಿದ ಮೇಲೆ ನಡೆದಿವೆ ಎಂದರು.