ಗಂಗಾವತಿ (ಕೊಪ್ಪಳ): ಮಕ್ಕಳನ್ನು ತಮ್ಮ ಶಾಲೆಗಳತ್ತ ಆಕರ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಇದರ ಜೊತೆಗೆ ಕಟ್ಟಡದ ಸೌಂದರ್ಯಕ್ಕೂ ಗಮನ ಕೊಡಬೇಕು. ಒಳ ಮತ್ತು ಹೊರಾಂಗಣಗಳನ್ನು ಆಕರ್ಷಣೀಯಗೊಳಿಸಲು ನಾನಾ ಚಿತ್ತಾರಗಳ ಮೊರೆ ಹೋಗುವುದು ಸಹಜ. ಇದಕ್ಕಾಗಿ ಶಾಲಾ ಆಡಳಿತ ಮಂಡಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತವೆ.
ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುತ್ತದೆ. ಇದಕ್ಕಾಗಿಯೇ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕಿದ ಉದಾಹರಣೆಗಳಿವೆ. ಆದ್ರೆ ಇಲ್ಲೊಂದು ಸರ್ಕಾರಿ ಶಿಕ್ಷಕರ ತಂಡ ಮಕ್ಕಳನ್ನು ಶಾಲೆಗೆ ಸೆಳೆಯುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ಶಾಲಾ ಬಿಡುವಿನ ಅವಧಿಯಲ್ಲಿ ಶಾಲೆಯ ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗಮನ ಇವರು ಸೆಳೆಯುತ್ತಿದ್ದಾರೆ.
'ನಲಿಕಲಿ ನಕ್ಷತ್ರ' ತಂಡ:ಗಂಗಾವತಿ ತಾಲೂಕಿನ ವಿವಿಧ ಶಾಲೆಗಳಲ್ಲಿ ನಾನಾ ವಿಷಯಗಳನ್ನು ಬೋಧನೆ ಮಾಡುವ ಸಂಧ್ಯಾ, ಮಾಲಾ, ನಾಗರತ್ನ, ಅನಿತಾ, ಮಲ್ಲಮ್ಮ, ಮಂಜುಳಾ, ನೀಲಮ್ಮ, ಶ್ರೀಧರ, ಮಲ್ಲೇಶಪ್ಪ ಹಾಗು ಕಲ್ಲನಗೌಡ ಎಂಬ ಶಿಕ್ಷಕರು 'ನಲಿಕಲಿ ನಕ್ಷತ್ರ' ಎಂಬ ಹೆಸರಲ್ಲಿ ತಂಡ ಕಟ್ಟಿಕೊಂಡು ಸೇವೆ ನೀಡುತ್ತಿದ್ದಾರೆ.
ಬಿಡುವಿನ ವೇಳೆ ಈ ಕಾಯಕ:ಶಾಲೆಗಳನ್ನು ಗುರುತಿಸುವುದು, ಆ ಶಾಲೆಗೆ ಹೋಗಿ ದಾನಿಗಳಿಂದ ಅಥವಾ ಶಾಲಾ ಸುಧಾರಣಾ ಸಮಿತಿಯಿಂದ ಬಣ್ಣಗಳ ವ್ಯವಸ್ಥೆ ಮಾಡಿಸಿಕೊಂಡು ಶಾಲೆಗಳ ಗೋಡೆಗಳನ್ನು ಆಕರ್ಷಕವಾಗಿ ಮಾಡುವ ಕಾಯಕದಲ್ಲಿ ಈ ತಂಡ ತೊಡಗಿಸಿಕೊಂಡಿದೆ. ಶಾಲೆಯ ಬಿಡುವಿನ ಅಥವಾ ರಜೆಯ ದಿನಗಳನ್ನು ವ್ಯರ್ಥ ಮಾಡದೇ, ಸಮಾನ ಮನಸ್ಕರ ಈ ಶಿಕ್ಷಕರ ತಂಡ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸುತ್ತಿದೆ. ಬಣ್ಣಗಳ ಮೂಲಕ ಮಕ್ಕಳನ್ನು ಸೆಳೆಯುವ ಕೆಲಸ ಮಾಡುತ್ತಿದೆ.
ಆರು ಶಾಲೆಗಳಿಗೆ ಸೇವೆ ಲಭ್ಯ: ಕಳೆದ ಒಂದು ವರ್ಷದ ಅವಧಿಯಲ್ಲಿ ಗಂಗಾವತಿ ತಾಲೂಕಿನ ಸಿದ್ದಿಕೇರಿ ಕ್ಯಾಂಪ್, ವಿರುಪಾಪುರ ತಾಂಡ, ಉಪ್ಪಿನಮಳಿ ಕ್ಯಾಂಪ್, ವಡ್ಡರಹಟ್ಟಿ, ಗುಂಡಮ್ಮ ಕ್ಯಾಂಪ್, ಜಯನಗರದ ಆರು ಶಾಲೆಗಳ ಗೋಡೆಗಳ ಮೇಲೆ ಚಿತ್ತಾರ ಮೂಡಿದೆ. ಆಕರ್ಷಕ ಗೊಂಬೆಗಳು, ಕಾರ್ಟೂನ್, ಹೂವು, ಹಣ್ಣು, ತರಕಾರಿ, ಪ್ರಾಣಿ, ಪಕ್ಷಿ ಸೇರಿದಂತೆ ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಕನ್ನಡ, ಗಣಿತ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಶಾಲೆಯ ಗೋಡೆ ಮೇಲೆ ಬಿಡಿಸಲಾಗುತ್ತಿದೆ.