ಕರ್ನಾಟಕ

karnataka

ETV Bharat / state

ಕೊರೊನಾ ಭೀತಿಯಿಂದ ಕಳೆಗುಂದಿದ ನಾಗರ ಪಂಚಮಿ: ಮನೆಗಷ್ಟೇ ಸೀಮಿತವಾದ ರೊಟ್ಟಿಹಬ್ಬ - Koppal Corona case

ನಾಗರಪಂಚಮಿಯಂದು ರೊಟ್ಟಿಹಬ್ಬದ ವಿಶೇಷ ದಿನವಾಗಿ ಒಬ್ಬರ ಮನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ಇನ್ನೊಬ್ಬರ ಮನೆಗೆ ಕೊಡುವ ಹಾಗೂ ಅವರಿಂದ ಪಡೆದುಕೊಳ್ಳುವ ಆಚರಣೆ ಇದೆ. ಆದರೆ ಕೊರೊನಾ ಹಿನ್ನೆಲೆ ಈ ಬಾರಿ ಯಾರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗದಂತೆ ಪ್ರಕಟಣೆ ಹೊರಡಿಸಲಾಗಿದೆ.

Famous  Rotti festival celebrated within a house in a fear of corona
ಕೊರೊನಾ ಭೀತಿಯಿಂದ ಮನೆಗಷ್ಟೇ ಸೀಮಿತವಾದ ಖಡಕ್​ ರೊಟ್ಟಿಹಬ್ಬ

By

Published : Jul 23, 2020, 5:40 PM IST

ಕೊಪ್ಪಳ: ಉತ್ತರ ಕರ್ನಾಟಕ ಭಾಗದಲ್ಲಿ ನಾಗರಪಂಚಮಿ ಬಹುದೊಡ್ಡ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ರೊಟ್ಟಿಗೂ ಒಂದು ದಿನವನ್ನು ವಿಶೇಷವಾಗಿ ಮೀಸಲಿಡಲಾಗುತ್ತದೆ. ಇದನ್ನು ರೊಟ್ಟಿಹಬ್ಬ ಎಂದು ಕರೆಯಲಾಗುತ್ತದೆ. ಆದರೆ ಕೊರೊನಾ ಭೀತಿ ಹಿನ್ನೆಲೆ ಇಂದು ರೊಟ್ಟಿಹಬ್ಬ ಕಳೆಗುಂದಿದೆ. ಕೊರೊನಾ ಸೋಂಕಿನ ಭೀತಿ ಇದೀಗ ಹಬ್ಬಗಳ ಮೇಲೂ ಬಿದ್ದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಬಹುಸಂಭ್ರಮದಿಂದ ಆಚರಿಸಲಾಗುತ್ತಿದ್ದ ನಾಗರಪಂಚಮಿಯ ಹಬ್ಬ ಈ ಬಾರಿ ಸಂಭ್ರಮ ಕಳೆದುಕೊಂಡಿದೆ. ಪ್ರತಿ ಬಾರಿ ರೊಟ್ಟಿಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿತ್ತು. ವಿವಿಧ ಬಗೆಯ ಬಗೆ ಬಗೆಯ ರೊಟ್ಟಿ, ವಿವಿಧ ಬಗೆಯ ಪಲ್ಯ ಈ ದಿನದ ಮುಖ್ಯ ಆಹಾರ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಖಡಕ್ ರೊಟ್ಟಿ, ಎಳ್ಳು ಹಚ್ಚಿದ ಹಾಗೂ ಮೆತ್ತನೆಯ ರೊಟ್ಟಿಗಳು, ನಾಲ್ಕಾರು ಬಗೆಯ ಪಲ್ಯ ಚಟ್ನಿ, ಉಪ್ಪಿನಕಾಯಿ, ಹಸಿ ತರಕಾರಿ, ಸೊಪ್ಪು ಹೀಗೆ ರೊಟ್ಟಿ ಹಬ್ಬದ ಊಟದ ವಿಶೇಷತೆಯಾಗಿರುತ್ತಿತ್ತು.

ಕೊರೊನಾ ಭೀತಿಯಿಂದ ಮನೆಗಷ್ಟೇ ಸೀಮಿತವಾದ ಖಡಕ್​ ರೊಟ್ಟಿಹಬ್ಬ

ಒಬ್ಬರು ಮತ್ತೊಬ್ಬರಿಗೆ ರೊಟ್ಟಿಯನ್ನು ನೀಡುತ್ತಾ ರೊಟ್ಟಿಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದಾಗಿ ರೊಟ್ಟಿ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

ಜಿಲ್ಲೆಯ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಹಬ್ಬದ ಸಂಭ್ರಮವಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ರೊಟ್ಟಿಹಬ್ಬವನ್ನು ತಮ್ಮ ತಮ್ಮ ಮನೆಯಲ್ಲಿ ಮಾತ್ರ ಆಚರಿಸುವಂತೆ ಹಾಗೂ ಯಾರೂ ಸಹ ನೆರೆಮನೆಯವರಿಗಾಗಲಿ ಅಥವಾ ಮತ್ತೊಬ್ಬರಿಗೆ ರೊಟ್ಟಿ ಕೊಡುವುದಾಗಲಿ, ತೆಗೆದುಕೊಳ್ಳುವುದಾಗಲಿ ಮಾಡಬಾರದು ಎಂದು ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಡಂಗೂರ ಸಾರಲಾಗಿದೆ.

ಹೀಗಾಗಿ ಈ ಬಾರಿ ರೊಟ್ಟಿಹಬ್ಬವನ್ನು ಅವರವರ ಮನೆಗಷ್ಟೇ ಸೀಮಿತಗೊಳಿಸಿಕೊಂಡಿದ್ದಾರೆ. ಅಲ್ಲದೆ ಪದ್ಧತಿಯನ್ನು ಬಿಡಬಾರದು ಎಂಬ ಕಾರಣಕ್ಕೆ ಜನರು ತಮ್ಮಷ್ಟಕ್ಕೆ ತಾವು ರೊಟ್ಟಿಹಬ್ಬ ಆಚರಿಸಿ ಸಂತೃಪ್ತರಾಗಿದ್ದಾರೆ.

ABOUT THE AUTHOR

...view details