ಕೊಪ್ಪಳ: ದೇಶದ ಎರಡನೇ ಸಿದ್ದಗಂಗಾ ಎಂದೇ ಖ್ಯಾತಿ ಪಡೆದಿರು ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆಧುನಿಕತೆ, ತಂತ್ರಜ್ಞಾನದ ಭರಾಟೆಯಲ್ಲಿ ಪಾರಂಪರಿಕ ಕೃಷಿ ಪರಿಕರಗಳ ಬಳಕೆ ಕಣ್ಮರೆಯಾಗಿ ದೊಡ್ಡ ದೊಡ್ಡ ಯಂತ್ರಗಳು ಹೊಲ ಮತ್ತು ಮನೆಗಳಲ್ಲಿ ತುಂಬಿಕೊಂಡಿವೆ. ಆದರೆ, ಪರಂಪರೆ ನಶಿಸಿ ಹೋಗುತ್ತಿರುವ ಈ ಕಾಲಗಟ್ಟದಲ್ಲಿ ಅಜ್ಜನ ಜಾತ್ರೆಯಲ್ಲಿ ಮತ್ತೊಮ್ಮೆ ಅವುಗಳೆಲ್ಲವನ್ನು ಕಣ್ಣತುಂಬ ನೋಡುವ ಭಾಗ್ಯ ಸಿಕ್ಕಿದೆ.
ಕೃಷಿ ಇಲಾಖೆ ಏರ್ಪಡಿಸಿದ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ ಮಲ್ಲಯ್ಯ ಗುರುಬಸಯ್ಯ ಗುರುಬಸಪ್ಪಜ್ಜನಮಠ ಅವರು ಒಕ್ಕಲುತನಕ್ಕೆ ಸಂಬಂಧಿಸಿದ ಸಾವಿರಾರು ಪಾರಂಪರಿಕ ಕೃಷಿ ಉಪಕರಣಗಳ ಮಾದರಿ ಸಂಗ್ರಹ ಪ್ರದರ್ಶನದ ಮಳಿಗೆ ಆಕರ್ಷಕ ಕೇಂದ್ರ ಬಿಂದು ಆಗಿದೆ.
ಪಾರಂಪರಿಕ ಕೃಷಿ ಪರಿಕರಗಳು.. ನಾರಿನ ಕಲ್ಲಿ, ಅಳತೆ ಮಾಪನಗಳಾದ ಎರಡು ಶೇರು, ಪಾವು, ಶೇರು, ಅರಕಾಲು, ಚಟಾಕ, ನೋಟಾಕು, ನೀಟಿವಿ, ಜಾರೀಪು ದಾನ್ಯ ಸಂಗ್ರಹಕ್ಕೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಗೋತ, ಬಳತ, ಮೀನು ಬಲಿ ಅಲ್ಲದೆ ಬೆಳಕಿಗಾಗಿ ಚಿಮ್ಮಣಿ, ಲಾಟಾನಗಳು, ಕೊರೊನಾ ನಿಯಂತ್ರಣ ಪ್ರಮುಖ ವಸ್ತುವಾಗಿರುವ ಮಾಸ್ಕ್, ಆಗ ರಾಶಿ ಸಮಯದಲ್ಲಿ ಸುಂಕ ಬಾಯಿ ಮತ್ತು ಮೂಗುಗಳಲ್ಲಿ ಸಂಗ್ರಹವಾಗಬಾರದೆಂದು ಟೆಂಗಿನಕಾಯಿ ಚಿಪ್ಪಿನಿಂದ ತಯಾರಿಸಿದ ಬಾಯಿ ಚಿಕ್ಕ, ಬಂಡಿಯಲ್ಲಿ ಬಳಸುವ ಈಚಲು ತಟ್ಟಿ, ಕಲ್ಲಿನ ರೂಲಿನ ಬಂಡಿ, ಬಿತ್ತನೆಗೆ ಬಳಸುತ್ತಿದ್ದ ಗೋಪಾಲ ಕುಂಟೆ, (ಚೆಂಡಗೂಲ) ಬಣವಿ ನಿರ್ಮಾಣ ಸಮಯದಲ್ಲಿ ಬಳಸುತ್ತಿದ್ದ ಬಡಮನಿ, ನಾಲ್ಕು ಹಲ್ಲಿನ ಮಡಕುಂಟಿ, ಆರು ಹಲ್ಲಿನ ಜಂತುಕುಂಟಿ, ಕೊನ್ನೆ ನಗ (ಐದು ಗೇಣಿಯದ್ದು) 9 ಮತ್ತು 10 ಗೇಣಿನ ನಗ.
ಬಡಮನಿ, ಈಳಿಗೆ, ಡೋಂಕು ಕಾಳಿನ ಕೂರುಗಿ, ಹಗೆ ಬಾಯಿ, ಬಾಯಿ ಪುಟ್ಟಿ, ನೀರು ತರಲಿಕ್ಕೆ ಬಳಸುತ್ತಿದ್ದ ಉಕ್ಕಡ, ಸವ ಜಂತ ಕೂರೂಗಿ, ಕೊಡತಿ, ಬಾಣಂತಿಯರ ಹೊರಸು, ಅಡಕಲ ಗಡಗಿ, ಬೆಣ್ಣಿ ಬಳಪದ ಕಲ್ಲು, ಸವಾರಿ ಪುಟ್ಟಿ, ಎಡಿ ಮಿನಿ, ಜತಿಗಿ, ಉಡಿ ಚೀಲ, ಗೆಜ್ಜೆ ಸರ, ಹಗ್ಗ, ಕವನಿ, ಕೊಳಕನ್ನಿ, ಕರಿ ಹಗ್ಗಾ, ಚಾಟಿ, ಮಗಡ, ಎಲೆ ಚೀಲ, ಎತ್ತಿನ ಜೂಲ, ಬಾಸೀಂಗ, ಕಡಗೋಲ, ಸಾಣಿ ಹಿಡಿಯುವ ಯಂತ್ರ, ಪಲ್ಲಕ್ಕಿ, ಹಾದಿ ಕೋಲು, ಚೌರಿ, ಎಕ್ಕಾ ಗಾಡಿ, ಒಂಟಿ ಬಂಡಿ, ನಿಟ್ಟಿನ ಅಟ್ಟ, ಜಮೀನು ಅಳತೆಯ ಸಾಕಳೆ, ತತ್ರಾಣಿ, ಪಿಂಗಾಣಿ, ನೆಲವು, ತೊಗಲಿನ ಬಾರ, ಗೆಜ್ಜಿ ಸರ, ಮರದ ಗಂಟೆ, ಬಾರಕೋಲ, ಉಡಿ ಚೀಲ, ಬಾಸೀಂಗ, ಕವನಿ, ಗ್ವಾರಿ, ಪಿಂಗಾಣಿ, ಆಕಾಶ ಕಾಯಗಳ ವೀಕ್ಷಣೆ ಯಂತ್ರ, ಗ್ರಾಮೋಫೋನ್, ಗಾಳಿ ಬೀಸುವ ಸಾಧನಗಳು ಸೇರಿದಂತೆ ಹಳೆ ನೋಟುಗಳು, ನಾಣ್ಯಗಳ ಸಂಗ್ರಹ ವಿಶೇಷವಾಗಿದೆ. ಜಾತ್ರೆಗೆ ಬಂದಂತಹ ಯಾತ್ರಿಕರು ಈ ಹಳೆ ಮಾದರಿ ವಿಶಿಷ್ಟ ಸಂಗ್ರಹ ಕೇಂದ್ರಕ್ಕೆ ಭೇಟಿ ಕೊಡದೆ ಹೋಗುವವರು ಜೀವನದಲ್ಲಿ ಏನನ್ನೋ ಕಳೆದುಕೊಂಡಂತೆ ಅಗುವುದು ಸಹಜ ಎನ್ನುತ್ತಾರೆ ಮಲ್ಲಯ್ಯ ಅಜ್ಜ.
ಕನ್ನಡ ಪಂಡಿತ.. 8ನೇ ತರಗತಿ ಓದಿರುವ ರೋಣ ಪಟ್ಟಣದ ಮಲ್ಲಯ್ಯನವರು ಕನ್ನಡ ಪಂಡಿತರು. ಕನ್ನಡ ಭಾಷೆಯನ್ನು ಆಳ ಅಧ್ಯಯನ ಮಾಡಿರುವ ಇವರು ಸರಾಗವಾಗಿ ಸಂಪೂರ್ಣ ಕನ್ನಡ ಮಾತನಾಡುವುದರ ಜೊತೆಗೆ ಕನ್ನಡ ವ್ಯಾಕರಣದಲ್ಲಿ ದಿವ್ಯ ಪಂಡಿತರಂತಿದ್ದಾರೆ. ವಿಶ್ವದಲ್ಲಿಯೇ ಇತಿಹಾಸ ಹೊಂದಿದ ಕನ್ನಡ ಭಾಷೆ ಉಳಿಯಬೇಕು. ಮಾತೃ ಭಾಷೆ ಅಳಿಯುವ ಹಂತದಲ್ಲಿದೆ. ಇದು ವಿಷಾದದ ಸಂಗತಿ. ಉಸಿರು ಇರುವವರಿಗೂ ಕನ್ನಡಕ್ಕಾಗಿ ಜೀವನ ಮುಡಿಪಾಗಿ ಇಡುತ್ತೇನೆ ಎನ್ನುತ್ತಾರೆ. ಕನ್ನಡ ಮೇಲಿನ ಪ್ರೀತಿ ಜೊತೆಗೆ ಖಗೋಳಶಾಸ್ತ್ರ ಅಧ್ಯಯನದ ಹುಚ್ಚು ಮಲ್ಲಯ್ಯನವರಿಗೆ ಬಹಳಷ್ಟಿದೆ. ಖಗೋಳಶಾಸ್ತ್ರದ ಅಧ್ಯಯನಕ್ಕಾಗಿ (ಲಂಡನ್ ದೇಶದ 1915 ರಲ್ಲಿನ ದೂರದರ್ಶಕ ಯಂತ್ರ) ಬಹು ಕಾಲದ ಪರಿಕರಗಳನ್ನು ತಮ್ಮ ಬಳಿ ಇನ್ನೂ ಜೀವಂತವಾಗಿರಿಸಿಕೊಂಡಿದ್ದಾರೆ.
ಮನುಕುಲವು 'ಬೆಂಕಿ' ಕಂಡು ಹಿಡಿದ ಬಳಿಕ ಮನುಕುಲ ಬಳಸಿದ ಬಹುತೇಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದು, ಈ ಪ್ರದರ್ಶನದ ಮಳಿಗೆಯ ವೈಶಿಷ್ಟ್ಯತೆಯಾಗಿದೆ.
ಇದನ್ನೂ ಓದಿ:ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಉಡಾವಣೆ.. ಡಿಆರ್ಡಿಒದಿಂದ ಮತ್ತೊಂದು ಸಾಧನೆ