ಕೊಪ್ಪಳ:ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವ ಬಿಜೆಪಿ ಸದಸ್ಯರ ಮೇಲೆ ಪಕ್ಷ ಶಿಸ್ತಿನ ಕ್ರಮ ಜರುಗಿಸುತ್ತದೆ ಎಂದು ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅವಿಶ್ವಾಸಕ್ಕೆ ಮುಂದಾಗಿರುವ ಬಿಜೆಪಿ ಸದಸ್ಯರ ಮೇಲೆ ಶಿಸ್ತು ಕ್ರಮ: ದೊಡ್ಡನಗೌಡ ಪಾಟೀಲ್ - ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್
ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವ ಕಾಂಗ್ರೆಸ್ ಸದಸ್ಯರ ಜೊತೆಗೆ ಬಿಜೆಪಿಯ ಇಬ್ಬರು-ಮೂವರು ಸದಸ್ಯರು ಇರಬಹುದು. ಅವರ ಮೇಲೆ ನಮ್ಮ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯರ ಜೊತೆ ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ನಮ್ಮ ಎರಡ್ಮೂರು ಜನ ಸದಸ್ಯರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಜಿ. ಪಂ. ಅಧ್ಯಕ್ಷರ ಅವಿಶ್ವಾಸಕ್ಕೆ ನಮ್ಮ ಪಕ್ಷದಿಂದ ಸಮ್ಮತಿ ಇಲ್ಲ. ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿರುವ ನಮ್ಮ ಸದಸ್ಯರನ್ನು ಕರೆದು ಮಾತನಾಡುತ್ತೇವೆ. ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರೆ ಸರಿ. ಇಲ್ಲವಾದಲ್ಲಿ ಪಕ್ಷದ ನಿಯಮಗಳಂತೆ ಅವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಜರುಗಿಸುತ್ತದೆ.
ಈ ಬೆಳವಣಿಗೆ ಕುರಿತಂತೆ ಈಗಾಗಲೇ ಪಕ್ಷದ ಹಿರಿಯರ ಗಮನಕ್ಕೆ ತರಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ತಾಂತ್ರಿಕವಾಗಿ ನಮ್ಮ ಪಕ್ಷದೊಂದಿಗೆ ಇಲ್ಲ. ಆದರೆ ಅವರು ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ಎಂದು ದೊಡ್ಡನಗೌಡ ಪಾಟೀಲ್ ಸೂಚ್ಯವಾಗಿ ಹೇಳಿದರು.