ಕೊಪ್ಪಳ: ಅಸ್ಪೃಶ್ಯತೆ ಆಚರಣೆಯಿಂದಾಗಿ ತಾಲೂಕಿನ ತಿಗರಿ ಗ್ರಾಮದಲ್ಲಿ ದಲಿತರ ಹಾಗೂ ಸವರ್ಣಿಯರ ನಡುವೆ ಉಂಟಾಗಿರುವ ಮನಸ್ತಾಪದ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ಅಧಿಕಾರಿಗಳು ನಡೆಸಿದ ಶಾಂತಿಸಭೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಘಟನೆಗೆ ಮೂಲಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾತಿ ನಿರ್ಮೂಲನಾ ಚಳವಳಿ ವೇದಿಕೆಯ ಮುಖಂಡ ಹನುಮೇಶ ಮ್ಯಾಗಳಮನಿ ಆಗ್ರಹಿಸಿದರು.
ಸಾಮೂಹಿಕ ವಿವಾಹದಲ್ಲಿ ದಲಿತ ಜೋಡಿಗೆ ಪ್ರತ್ಯೇಕ ವಿವಾಹ ವಾಗಲು ಸೂಚನೆ ಆರೋಪ: ಕ್ರಮಕ್ಕೆ ಆಗ್ರಹ - Demand to take action on casteist in Koppal
ತಿಗರಿ ಗ್ರಾಮದಲ್ಲಿ ದಲಿತರ ಹಾಗೂ ಸವರ್ಣಿಯರ ನಡುವೆ ಉಂಟಾಗಿರುವ ಮನಸ್ತಾಪದ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ಅಧಿಕಾರಿಗಳು ನಡೆಸಿದ ಶಾಂತಿಸಭೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಘಟನೆಗೆ ಮೂಲಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾತಿ ನಿರ್ಮೂಲನಾ ಚಳವಳಿ ವೇದಿಕೆಯ ಮುಖಂಡ ಹನುಮೇಶ ಮ್ಯಾಗಳಮನಿ ಆಗ್ರಹಿಸಿದರು.
ತಿಗರಿ ಗ್ರಾಮದ ದಲಿತ ಸಮುದಾಯದ ಯುವಕರೊಂದಿಗೆ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹನುಮೇಶ ಮ್ಯಾಗಳಮನಿ, ಈ ಪ್ರಕರಣದಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಫಕಿರೇಶ್ವರ ಜಾತ್ರೆಯ ಅಂಗವಾಗಿ ಇತ್ತಿಚೆಗೆ ಗ್ರಾಮದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದರು. ಅದರಲ್ಲಿ ದಲಿತ ಸಮುದಾಯದ 4 ಜೋಡಿಗಳಿಗೆ ಪ್ರತ್ಯೇಕವಾಗಿ ಮದುವೆ ಮಾಡಿಸಲು ಮುಂದಾದರು. ಎಲ್ಲರಂತೆ ಮದುವೆಯ ಶುಲ್ಕವನ್ನು ದಲಿತ ಜೋಡಿಗಳಿಂದಲೂ ಪಡೆದಿದ್ದಾರೆ. ಆದರೂ ಅವರಿಗೆ ಬೇರೆ ಸ್ಥಳದಲ್ಲಿ ಮದುವೆ ಮಾಡಿಕೊಳ್ಳಿ ಎಂದು ಹೇಳಿದರು. ಇದನ್ನು ಅಲ್ಲಿನ ದಲಿತ ಯುವಕರು ಪ್ರಶ್ನಿಸಿದ್ದಕ್ಕೆ ಸವರ್ಣಿಯರು ಬಹಿಷ್ಕಾರ ಹಾಕಿದವರಂತೆ ವರ್ತಿಸಿದರು. ಘಟನೆ ಹಿನ್ನೆಲೆ ಶಾಸಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ ಶಾಂತಿಸಭೆ ನಡೆಸಿದರು. ಆದರೆ, ಅದು ಪ್ರಯೋಜವಾಗದಂತಾಗಿದೆ ಎಂದರು.
ಗ್ರಾಮದಲ್ಲಿ ದಲಿತರ ಸ್ಥಿತಿ ಬದಲಾಗಿಲ್ಲ. ಚಹಾ ಅಂಗಡಿಯಲ್ಲಿ ದಲಿತರಿಗೆ ನೀರು ಎತ್ತಿ ಹಾಕಿದವರ ಮೇಲೆ ಮಾತ್ರ ಈಗ ಪ್ರಕರಣ ದಾಖಲಿಸಿದ್ದಾರೆ. ಆದರೆ, ಘಟನೆಗೆ ಮೂಲ ಕಾರಣವಾದ ಸಾಮೂಹಿಕ ವಿವಾಹ ಆಯೋಜನೆ ಮಾಡಿದ ಮುಖಂಡರ ಮೇಲೆ ಕೇಸ್ ದಾಖಲಿಸಿಲ್ಲ. ಇದು ಅಧಿಕಾರಿಗಳು ಮಾಡಿರುವ ಕರ್ತವ್ಯ ಲೋಪ. ಕೂಡಲೇ ಸಾಮೂಹಿಕ ವಿವಾಹ ಆಯೋಜನೆ ಮಾಡಿದ್ದ ಮುಖಂಡರ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಹನುಮೇಶ ಮ್ಯಾಗಳಮನಿ ಎಚ್ಚರಿಕೆ ನೀಡಿದರು.