ಕೊಪ್ಪಳ: ಜಿಲ್ಲೆಯ ಗಂಗಾವತಿ ಡಿಪೋಗೆ ಸೇರಿದ ಕೊಲ್ಲಾಪುರ ಬಸ್ನ ನಿರ್ವಾಹಕ ಮಂಜುನಾಥ ಅವರ ಮಗಳು ತೀರಿಹೋದರೂ, ಆ ವಿಷಯವನ್ನು ಡಿಪೋದ ಅಧಿಕಾರಿಗಳು ಮಂಜುನಾಥ ಅವರಿಗೆ ತಿಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆಯವರಾದ ಮಂಜುನಾಥ್ ಅವರ ಕುಟುಂಬ, ತಾಲೂಕಿನ ರಾಂಪೂರದಲ್ಲಿ ವಾಸವಾಗಿದೆ. ಇವರ ಮಗಳು ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಸಾವನ್ನಪಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್ಗೆ ತಿಳಿಸಲು ಗಂಗಾವತಿ ಬಸ್ ಡಿಪೋಗೆ ಕುಟುಂಬದವರು ಫೋನ್ ಮಾಡಿ ತಿಳಿಸಿದ್ದಾರಂತೆ. ಆದರೆ, ಅಲ್ಲಿನ ಅಧಿಕಾರಿಗಳು ಮಂಜುನಾಥ್ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೆ ಕೆಲಸಕ್ಕೆ ಕಳುಹಿಸಿದ್ದಾರೆ.
ಸಾಯುವ ಮುನ್ನ ಮಗಳ ಮುಖ ನೋಡದ ನತದೃಷ್ಟ ತಂದೆ ಮಂಜುನಾಥ್ ಕೆಲಸಕ್ಕೆ ಹೋಗಿ ನಿನ್ನೆ ರಾತ್ರಿ ಡಿಪೋಗೆ ವಾಪಾಸ್ ಬಂದಾಗ ವಿಷಯ ತಿಳಿದಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಳಗಾಗಿದ್ದಾರೆ. ಕೂಡಲೇ ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿ, ರಜೆ ಕೇಳಿದರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಯ ಬಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ಕೊಡುತ್ತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಕಂಡಕ್ಟರ್ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ನಡುವೆ, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗಂಗಾವತಿ ಡಿಪೋ ಮ್ಯಾನೇಜರ್, ಮನೆಯವರು ಫೋನ್ ಮಾಡಿದಾಗ ಯಾರು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಸಂಜೆವರೆಗೂ ನಾನು ಡಿಪೋದಲ್ಲಿ ಇದ್ದೇನೆ ಯಾರಿಗೆ ಫೋನ್ ಹಚ್ಚಿದ್ದಾರೆ ಅಂತಾ ಗೊತ್ತಿಲ್ಲ ಎಂದು ನುಣಿಚಿಕೊಳ್ಳುವ ಯತ್ನವನ್ನೂ ಮಾಡಿದ್ದಾರೆ.