ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಭೀತಿ ಹಾಗೂ ಲಾಕ್ಡೌನ್ ಪರಿಣಾಮದಿಂದ ಬಹುತೇಕ ಎಲ್ಲ ವರ್ಗಗಳ ಜನರ ಬದುಕು ದುಸ್ತರವಾಗಿದೆ. ಕ್ಯಾಟರಿಂಗ್ ಉದ್ಯೋಗ ಮಾಡುತ್ತಿದ್ದವರ ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದವರ ಬದುಕು ಸಹ ಬೀದಿಗೆ ಬೀಳುವಂತಾಗಿದೆ. ಜಿಲ್ಲೆಯಲ್ಲಿಯೂ ಸಹ ಕ್ಯಾಟರಿಂಗ್ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ.
ಹೌದು, ಮದುವೆ, ನಿಶ್ಚಿತಾರ್ಥ ಸೇರಿದಂತೆ ಅನೇಕ ಸಭೆ ಸಮಾರಂಭಗಳಿಗೆ ಬಗೆ ಬಗೆಯ, ರುಚಿಕರವಾದ ಭೋಜನ, ಉಪಹಾರ ತಯಾರಿಸಿ ಪೂರೈಸುವ ಉದ್ಯೋಗ ಮಾಡುತ್ತಿದ್ದವರ ಬದುಕೀಗ ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಹಿನ್ನೆಲೆ ಹೆಚ್ಚು ಜನ ಸೇರಿಸಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಕೆಲವರು ಕಾರ್ಯಕ್ರಮಗಳನ್ನು ಮುಂದೂಡಿದ್ದರೆ, ಮತ್ತೆ ಕೆಲವರು ಮನೆ ಮಟ್ಟಿಗೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದ್ರಿಂದ ಕ್ಯಾಟರಿಂಗ್ ಉದ್ಯಮ ನಷ್ಟ ಅನುಭವಿಸುತ್ತಿದೆ.
ಜಿಲ್ಲೆಯಲ್ಲಿ ಕ್ಯಾಟರಿಂಗ್ ಉದ್ಯೋಗ ಮಾಡುವವರು ಸುಮಾರು 20 ಮಂದಿ ಇದ್ದಾರೆ. ಕ್ಯಾಟರಿಂಗ್ಗೆ ಪೂರಕವಾಗಿ ಕೆಲಸ ಮಾಡುವ ಬಾಣಸಿಗರು, ಸಹಾಯಕರು, ಅಡುಗೆ ಬಡಿಸುವವರು, ಪಾತ್ರೆ ತೊಳೆಯುವವರು ಸೇರಿ ನೂರಾರು ಜನರು ಇದ್ದಾರೆ. ಮದುವೆ, ನಿಶ್ಚಿತಾರ್ಥ, ಸಭೆ ಸಮಾರಂಭಗಳಿಗೆ ರುಚಿಯಾದ ಆಹಾರ ತಯಾರಿಸಿ, ಅದನ್ನು ಪೂರೈಸಿ ದುಡಿಮೆ ಮಾಡಿಕೊಳ್ಳುತ್ತಿದ್ದೆವು. ಆದರೆ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವುದರಿಂದ ಯಾವುದೇ ಕಾರ್ಯಕ್ರಮಗಳು ಸಿಗದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ ಎಂದು ಕ್ಯಾಟರರ್ ಗಿರೀಶ ಪಾನಘಂಟಿ ತಿಳಿಸಿದ್ದಾರೆ.