ಕೊಪ್ಪಳ:ಕೊರೊನಾ ಸೋಂಕಿನಿಂದ ಗುಣಮುಖನಾಗಿ ನಿನ್ನೆ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿರುವ P-1173 ವಿರುದ್ಧ ಕಾನೂನು ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಟ್ರಾವೆಲ್ ಹಿಸ್ಟರಿ ಕುರಿತು P-1173 ತನ್ನ ಹೇಳಿಕೆಯನ್ನು ಬದಲಾಯಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಕಾನೂನು ಕ್ರಮಕ್ಕೆ ಜಿಲ್ಲಾಡಳಿತ ಚಿಂತನೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಟ್ರಾವೆಲ್ ಹಿಸ್ಟರಿ ಕುರಿತಂತೆ P-1173 ಈ ಹಿಂದೆ ನೀಡಿದ್ದ ಮಾಹಿತಿಯನ್ನು ಈಗ ಮತ್ತೆ ಬದಲಾಯಿಸಿ ಹೇಳುತ್ತಿದ್ದಾನೆ. ಪೊಲೀಸರು ಈತನ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುವಾಗ ತಾನು ಕೊಪ್ಪಳಕ್ಕೆ ಯಾವ ವಾಹನದಲ್ಲಿ ಎಷ್ಟು ಗಂಟೆಗೆ ಬಂದಿದ್ದ ಎಂಬುದರ ಕುರಿತು ಮಾಹಿತಿ ನೀಡಿದ್ದ. ಅದು ಮ್ಯಾಚ್ ಆಗುತ್ತಿದೆ. ಅದರಂತೆ ಆ ವಾಹನ ಪತ್ತೆ ಮಾಡಲಾಗುತ್ತಿದೆ. ಆದರೆ ಆ ಟಾಟಾ ಏಸ್ನ ನಂಬರ್ ಸಿಸಿ ಕ್ಯಾಮರಾದಲ್ಲಿ ಸರಿಯಾಗಿ ಕಾಣದ ಹಿನ್ನೆಲೆಯಲ್ಲಿ ಆ ವಾಹನ ಹಾಗೂ ಅದರ ಚಾಲಕ ಇನ್ನೂ ಪತ್ತೆಯಾಗಿಲ್ಲ. ಈಗ ತಾನು ಟಾಟಾ ಏಸ್ನಲ್ಲಿ ಬಂದಿಲ್ಲ ಎಂದು ಪೊಲೀಸರು ಮತ್ತೆ ವಿಚಾರಿಸುವಾಗ P-1173 ಹೇಳುತ್ತಿದ್ದಾನೆ. ತಪ್ಪು ಮಾಹಿತಿ ನೀಡುತ್ತಿರುವ ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದೇ ವ್ಯಕ್ತಿ ಕೊಪ್ಪಳದಿಂದ ಕುಷ್ಟಗಿಗೆ ಬಸ್ ಮೂಲಕ ಪ್ರಯಾಣಿಸಿದ್ದರಿಂದ ಒಬ್ಬ ಪ್ರಯಾಣಿಕ ಸಹ ಪತ್ತೆಯಾಗಿಲ್ಲ. ಆ ಪ್ರಯಾಣಿಕ ಮೊಬೈಲ್ ನಂಬರ್ ಸಹ ತಪ್ಪಾಗಿ ನೀಡಿದ್ದಾನೆ. ಜಿಲ್ಲೆಗೆ ಬೇರೆ ಬೇರೆ ಕಡೆಯಿಂದ ಜನರು ಬರ್ತಿದ್ದಾರೆ. ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಸರಿಯಾದ ವಿಳಾಸ ಹಾಗೂ ಸರಿಯಾದ ಫೋನ್ ನಂಬರ್ ಪಡೆಯಬೇಕು. ಅಲ್ಲದೆ ಪ್ರಯಾಣಿಕ ನೀಡಿರುವ ಮೊಬೈಲ್ ಸಂಖ್ಯೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸರಿಯಾದ ಫೋನ್ ನಂಬರ್, ವಿಳಾಸ ಇರದಿದ್ದರೆ ಅವರನ್ನು ಟ್ರೇಸ್ ಮಾಡಲು ಕಷ್ಟವಾಗುತ್ತದೆ. ಹೀಗಾಗಿ, ಪ್ರತಿ ಪ್ರಯಾಣಿಕರ ಸರಿಯಾದ ಸಂಪರ್ಕ ಸಂಖ್ಯೆಯನ್ನು, ವಿಳಾಸವನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.