ಕುಷ್ಟಗಿ: ಆಗಸ್ಟ್ 15ರೊಳಗೆ ತಾಲೂಕು ಕ್ರೀಡಾಂಗಣದ ಫೆವಿಲಿಯನ್ ಬ್ಲಾಕ್ಗೆ ಛಾವಣಿ ಸೇರಿದಂತೆ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಕೆಆರ್ ಐಡಿಎಲ್ ಜೆ.ಇ. ಇರ್ಫಾನ್ ಅವರಿಗೆ ಸೂಚಿಸಿದರು.
ಆ.15ರೊಳಗೆ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಬಯ್ಯಾಪುರ ಸೂಚನೆ ತಾಲೂಕು ಕ್ರೀಡಾಂಗಣದಲ್ಲಿ 1 ಕೋಟಿ ರೂ. ವೆಚ್ಚದ ಮುಂದುವರಿದ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕಾಮಗಾರಿ ತ್ವರಿತಗತಿಯಲ್ಲಿ ಹಾಗೂ ಗುಣಮಟ್ಟದಲ್ಲಿ ಲೋಪ ಆಗದಂತೆ ಕೆಲಸ ನಿರ್ವಹಿಸಲು ಸೂಚಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯಿಂದ ಕಾಮಗಾರಿ ವಿಳಂಬವಾಗಿರುವುದಾಗಿ ಕೆಆರ್ಐಡಿಎಲ್ ಇರ್ಫಾನ್ ತಿಳಿಸಿದರು. ಇದೇ ವೇಳೆ, ಶಾಸಕ ಬಯ್ಯಾಪುರ ಅವರು ಕಾಮಗಾರಿ ನಿರತರಿಗೆ ಕೊರೊನಾ ಹೆಚ್ಚುತ್ತಿದ್ದು, ಕೆಲಸದ ವೇಳೆಯಲ್ಲೂ ಮಾಸ್ಕ್ ಧರಿಸಿ ರೋಗ ಬರದಂತೆ ಮುಂಜಾಗ್ರತೆ ವಹಿಸಿ. ಮೊದಲು ನೀವು ಆರೋಗ್ಯದಿಂದ ಇರಿ. ಕೊರೊನಾ ಬಗ್ಗೆ ನಿರ್ಲಕ್ಷ ಮಾಡದಿರಿ ಎಂದು ಸಲಹೆ ನೀಡಿದರು.
ಕಾಮಗಾರಿ ಪರಿಶೀಲಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಇನ್ನು ತಾಲೂಕಿನ ಗಡಿ ನಿಲೋಗಲ್ ಗ್ರಾಮ ಸಮೀಪದ ಅಚನೂರು ಮಲ್ಲಯ್ಯ ದೇವಸ್ಥಾನದ ಬಳಿ ಇರುವ ಕೆರೆಗೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು, ಮೀಸಲು ಅರಣ್ಯ ಪ್ರದೇಶದ ಗುಡ್ಡದ ಮೇಲೆ ಬಿದ್ದ ಮಳೆ ನೀರನ್ನು ಬಳಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, ಡಿಎಫ್ಒ ಹರ್ಷಭಾನು ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಬಯ್ಯಾಪುರ ಈ ಹಿನ್ನೆಲೆಯಲ್ಲಿ ಮೀಸಲು ಅರಣ್ಯ ಪ್ರದೇಶದ ಗುಡ್ಡದ 2 ಕಿ.ಮೀ. ಎತ್ತರ ಪ್ರದೇಶದಲ್ಲಿ ಸುತ್ತಾಡಿದ ಅವರು, ಈ ಪ್ರದೇಶದಲ್ಲಿ ಬೀಳುವ ಮಳೆ ನೀರು ಬದಾಮಿ ತಾಲೂಕಿಗೆ ಹೊಂದಿಕೊಂಡಿರುವ ರಂಗ ಸಮುದ್ರ ಕೆರೆಗೆ ಹರಿಯುತ್ತದೆ. ಈ ಕೆರೆಗೆ ನೈಸರ್ಗಿಕವಾಗಿ ಹರಿವು ಜಾಸ್ತಿಯಿದ್ದು, ಇದರ ಹರಿವಿನ ನೀರನ್ನು 500 ಮೀಟರ್ ಟ್ರಂಚ್ ಅಗೆದು ತಿರುವಿನ ಮೂಲಕ ಅಚನೂರು ಮಲ್ಲಯ್ಯ ಕೆರೆಗೆ ಕಲ್ಪಿಸುವ ಕುರಿತು ಶಾಸಕ ಬಯ್ಯಾಪುರ ಅವರು ಪ್ರಸ್ತಾಪಿಸಿದರು.
ಡಿಎಫ್ಓ ಹರ್ಷ ಭಾನು ಅವರು ಮೀಸಲು ಅರಣ್ಯ ವ್ಯಾಪ್ತಿಯ ನಕ್ಷೆ ಹಾಗೂ ಸ.ನಂ. 7 ಹಾಗೂ 8 ವಾಸ್ತವ ಸ್ಥಿತಿ ಪರಿಶೀಲಿಸಿ ಮೀಸಲು ಅರಣ್ಯ ಪ್ರದೇಶದಲ್ಲಿ ಮೂಲ ಸ್ಥಿತಿಯನ್ನು ಬದಲಿಸಲಾಗದು. ಈ ಪ್ರದೇಶದಲ್ಲಿ ಬಿದ್ದ ಮಳೆ ನೀರು ನೈಸರ್ಗಿಕವಾಗಿ ಅಚನೂರು ಮಲ್ಲಯ್ಯ ಕೆರೆಗೆ ಹರಿದು ಬರುವುದಾಗಿ ಸ್ಪಷ್ಟಪಡಿಸಿದರು. ಈ ವೇಳೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಅನ್ವರ್, ಗ್ರಾಮದ ಮಹಾಂತೇಶ ಶೆಟ್ಟರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.