ಕುಷ್ಟಗಿ (ಕೊಪ್ಪಳ): ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕುಷ್ಟಗಿ ಪುರಸಭೆಯ ಇಬ್ಬರು ಕೈ ಸದಸ್ಯರಿಗೆ ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದೆ.
ಕುಷ್ಟಗಿ ಪಟ್ಟಣ 3ನೇ ವಾರ್ಡ್ನ ಸದಸ್ಯ ಗೀತಾ ಶರಣಪ್ಪ ತುರಕಾಣಿ ಹಾಗೂ 17ನೇ ವಾರ್ಡ್ನ ಸದಸ್ಯ ವೀರೇಶ್ ಬೆದವಟ್ಟಿ ಅವರಿಗೆ ಈ ನೋಟಿಸ್ ಜಾರಿ ಮಾಡಲಾಗಿದೆ.
ಆ.27 ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಇವರು ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು ಬಿಜೆಪಿಯ ಗಂಗಾಧರಸ್ವಾಮಿ ಹಿರೇಮಠ ಹಾಗೂ ಪಕ್ಷೇತರ ಸದಸ್ಯೆ ಉಪಾಧ್ಯಕ್ಷೆ ರಾಜೇಶ್ವರಿ ಆಡೂರ ಪರ ಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಹ ಬಹುಮತ ಇದ್ದಾಗ್ಯೂ ಆಡಳಿತ ನಡೆಸುವುದಕ್ಕೆ ಹಿನ್ನೆಡೆ, ಮುಜಗುರ ಉಂಟಾಗಿತ್ತು.
ಕಾಂಗ್ರೆಸ್ ಪಕ್ಷದಿಂದ ಜಿಲ್ಲಾಧಿಕಾರಿಗೆ ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 6ನೇ ವಾರ್ಡ್ ಸದಸ್ಯ ರಾಮಣ್ಣ ಬಿನ್ನಾಳ ಅವರು ಸದರಿ ಸದಸ್ಯರ ಸದಸ್ಯತ್ವ ರದ್ದತಿಗೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಸದಸ್ಯರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.