ಕೊಪ್ಪಳ: "ನ್ಯಾಯಾಲಯಕ್ಕಿಂತ ಗೃಹ ಸಚಿವ ಪರಮೇಶ್ವರ್ ಅವರು ದೊಡ್ಡವರಲ್ಲ. ದೊಡ್ಡವರಾಗಲು ಸಾಧ್ಯನೂ ಇಲ್ಲ. ನ್ಯಾಯಾಲಯ ಈಗಾಗಲೇ 15 ಕೇಸ್ಗಳನ್ನು ಖುಲಾಸೆ ಮಾಡಿದೆ. 31 ವರ್ಷಗಳ ನಂತರ ರಾಮಮಂದಿರ ಪ್ರಕರಣವನ್ನು ಕೆದಕಿ, ಈಗ ಬಂಧನ ಮಾಡುತ್ತೀರಿ. ನಿಮ್ಮ ಮೇಲೆ ಜನರು ಗೌರವ ಇಟ್ಟುಕೊಂಡಿದ್ದಾರೆ. ನೀವು ನಿಮ್ಮ ಇಲಾಖೆ ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುತ್ತಾ ಜನರ ಕೆಂಗಣ್ಣಿಗೆ ಗುರಿಯಾಗಬೇಡಿ" ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಕೊಪ್ಪಳದ ಗವಿಮಠದ ಆವರಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಪರಮೇಶ್ವರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. 31 ವರ್ಷಗಳಿಂದ ಇವರು ಕಡಲೆಪುರಿ ತಿನ್ನುತ್ತಿದ್ದರಾ?. ಹತ್ತಾರು ಜನ ತನಿಖಾಧಿಕಾರಿಗಳಿಗೆ ಏನೂ ಗೊತ್ತಿರಲಿಲ್ಲವಾ?. ಶ್ರೀಕಾಂತ್ ಪೂಜಾರಿ ದೇಶಾಂತರ ಹೋಗಿದ್ದರಾ, ತಲೆ ಮರೆಸಿಕೊಂಡಿದ್ದರಾ?. ಇವರಿಗೆ ನಾಚಿಕೆಯಾಗುವುದಿಲ್ಲವೇ ಸಮರ್ಥನೆ ಮಾಡಿಕೊಳ್ಳಲು" ಎಂದು ಕಿಡಿಕಾರಿದರು.
ಬಿ.ಕೆ.ಹರಿಪ್ರಸಾದರನ್ನು ವಶಕ್ಕೆ ಪಡೆಯಬೇಕು- ಶ್ರೀರಾಮುಲು: ಮತ್ತೊಂದೆಡೆ, ಮಾಜಿ ಸಚಿವ ಬಿ.ಶೀರಾಮುಲು ಮಾತನಾಡಿ, "ಗೋದ್ರಾ ಪ್ರಕರಣದಂತಹ ಮತ್ತೊಂದು ಪ್ರಕರಣ ನಡೆಯಲಿದೆ ಎಂದು ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದರ್ ಅವರನ್ನು ವಶಕ್ಕೆ ತೆಗೆದುಕೊಂಡು ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು. ರಾಮಮಂದಿರ ಉದ್ಘಾಟನೆ ನಡೆಯುವ ಈ ಸಂದರ್ಭದಲ್ಲಿ ರಾಮಮಂದಿರಕ್ಕೆ ಕಳಂಕ ತರುವುದಕ್ಕೆ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಸತ್ಯಾಸತ್ಯತೆ ತಿಳಿಯಲು ಬಿ.ಕೆ.ಹರಿಪ್ರಸಾದ್‌ರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಕ್ಷುಲ್ಲಕ ರಾಜಕಾರಣಕ್ಕಾಗಿ, ರಾಜಕಾರಣದ ಪ್ರತಿಷ್ಠೆಗಾಗಿ ಈ ರೀತಿಯಾಗಿ ಮಾತನಾಡಿರೋದು ನಾಚಿಕೆಗೇಡಿತನ" ಎಂದರು.