ಕೊಪ್ಪಳ:ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ. ವ್ಯವಹಾರಿಕವಾಗಿ ಬರುತ್ತಾರೆ, ವ್ಯವಹಾರಿಕವಾಗಿ ದೇಶವನ್ನು ಹಾಳು ಮಾಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನಾನು ರಾಜಕೀಯವಾಗಿ ಒಂದು ಹೊಸ ಹೆಜ್ಜೆ ಇಟ್ಟಿದ್ದೇನೆ. ಸ್ವಂತ ಶಕ್ತಿ, ಸ್ವಂತ ಚಿಂತನೆ ಹಾಗೂ ಅನೇಕರ ಅಭಿಪ್ರಾಯದ ಮೇಲೆ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಮಾಡಿ ಅಧಿಕೃತವಾಗಿ ಪಕ್ಷ ಸೇರುವುದು ನನ್ನ ಆಸೆಯಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ ಅದನ್ನೇ ಹೇಳಿದ್ದರು. ಆದರೆ, ಕೋವಿಡ್ ನಿಯಮದ ಹಿನ್ನೆಲೆ ದೊಡ್ಡ ಕಾರ್ಯಕ್ರಮ ಮಾಡಿಲ್ಲ. ಈಗಾಗಲೇ ನಾನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು, ಕಾರ್ಯಕರ್ತನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ನಲ್ಲಿ ಗೊಂದಲವಿದೆ ಎಂದು ನಾನು ಭಾವಿಸುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಬ್ಬರೂ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.