ಕೊಪ್ಪಳ:ಕಾಂಗ್ರೆಸ್, ಜೆಡಿಎಸ್ ನಾಯಕರು ಎಷ್ಟೇ ಹಾರಾಡಿದರೂ ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಸರ್ಕಾರದ ವಿಜಯಯಾತ್ರೆ ಮುಂದುವರೆಯಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಣ, ಹೆಂಡ ಹಂಚಿಕೆ ಮಾಡಿ ಚುನಾವಣೆ ಎದುರಿಸಿತ್ತು. ಆ ಕಾರಣಕ್ಕೆ ಅವರು ಹೀಗೆ ಮಾತಾಡುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳಿಂದ ಬಿಜೆಪಿ ಮತ ಕೇಳುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ವೈಯಕ್ತಿಕ ವಿಚಾರವಿಟ್ಟುಕೊಂಡು ಟೀಕೆ ಆರಂಭಿಸಿವೆ. ಈ ರೀತಿ ಯಾವುದೇ ಪಕ್ಷದವರು ಮಾಡಿದರೂ ಅದು ತಪ್ಪಾಗುತ್ತದೆ ಎಂದರು.
ಮಾಜಿ ಸಿಎಂ ಬಿಎಸ್ವೈ ಕುಟುಂಬವನ್ನು ಐಟಿ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರ ಕುಟುಂಬವನ್ನು ಟಾರ್ಗೆಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಿಎಸ್ವೈ ಪ್ರವಾಸವನ್ನು ಯಾರೂ ಬೇಡ ಅಂದಿಲ್ಲ. ಪ್ರತಿಪಕ್ಷಗಳ ಇಂತಹ ಗೊಡ್ಡು ಟೀಕೆಗೆ ಬೆಲೆ ಕೊಡುವ ಅಗತ್ಯವಿಲ್ಲ. ಬಿಜೆಪಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ಯಡಿಯೂರಪ್ಪನವರ ಗುರಿ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನನಗೆ ಉಸ್ತುವಾರಿ ನೀಡಿಲ್ಲ ಎಂದೇನೂ ಇಲ್ಲ. ಮುಂಚಿತವಾಗಿಯೇ ನನಗೆ ಪ್ರಚಾರಕ್ಕೆ ಹೋಗಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹೇಳಿದ್ದರು. ಉಸ್ತುವಾರಿ ನೀಡದಿದ್ದರೂ ನಾನು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.