ಗಂಗಾವತಿ: ಕೋವಿಡ್ ರೋಗಿಗಳಿಗಾಗಿ ಜಿಲ್ಲೆಯಲ್ಲಿ ಆರಂಭಿಸಲಾದ ಆಸ್ಪತ್ರೆಗಳಲ್ಲಿ ಬೆಡ್ಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಗುಣಮಟ್ಟದ ಚಿಕಿತ್ಸೆ, ವೈದ್ಯರ ಕಾಳಜಿ ಮೊದಲಾದ ಕಾರಣಕ್ಕೆ ಕೇವಲ ಗಂಗಾವತಿ, ಕಾರಟಗಿ, ಕನಕಗಿರಿ ಮಾತ್ರವಲ್ಲದೆ ನೆರೆಯ ಬಳ್ಳಾರಿ, ರಾಯಚೂರು ಜಿಲ್ಲೆಯ ಸೋಂಕಿತರು ಇಲ್ಲಿಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗುತ್ತಿದಾರೆ. ಪರಿಣಾಮ ಗಂಗಾವತಿಯಲ್ಲಿ ಬೆಡ್ಗಳ ತೀವ್ರ ಕೊರತೆ ಉಂಟಾಗಿದೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕೇವಲ 70 ಬೆಡ್ಗಳ ವ್ಯವಸ್ಥೆ ಇದ್ದರೆ, ಇಡೀ ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದ ಬೆಡ್ ವ್ಯವಸ್ಥೆಯನ್ನು ಗಂಗಾವತಿಯಲ್ಲಿ ಮಾಡಲಾಗಿದೆ. ಉಪವಿಭಾಗ ಆಸ್ಪತ್ರೆಯಲ್ಲಿ 54 ಹಾಗೂ ಎಂಸಿಎಚ್ ಆಸ್ಪತ್ರೆಯಲ್ಲಿ 57 ಒಟ್ಟು, ನೂರಕ್ಕೂ ಅಧಿಕ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಜನರಲ್ ಬೆಡ್ 70, ಐಸಿಯು ಬೆಡ್ 0, ವೆಂಟಿಲೆಟರ್ ವ್ಯವಸ್ಥೆ 22 ಬೆಡ್ಗಳಿಗೆ ಇದೆ.
ಗಂಗಾವತಿಯ ಉಪವಿಭಾಗ, ಎಂಸಿಎಚ್ ಆಸ್ಪತ್ರೆಯಲ್ಲಿ ಕೋವಿಡ್ ಜನರಲ್ ಬೆಡ್ 111, ಐಸಿಯು 16, ವೆಂಟಿಲೆಟರ್ 16 ಬೆಡ್ ಇದೆ. ಸೋಂಕಿತರಿಗೆ ಆಕ್ಸಿಜನ್, ವೆಂಟಿಲೇಟರ್ ಬೆಡ್ ಬೇಕು ಎಂದಾದಲ್ಲಿ ಹಾಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಡಿಸ್ಚಾರ್ಜ್ ಆದ ಬಳಿಕವೇ ಪ್ರವೇಶ ನೀಡಬೇಕಾದ ದುಃಸ್ಥಿತಿ ಎದುರಾಗಿದೆ.