ಕೊಪ್ಪಳ: ಸಿಎಂ ಬದಲಾವಣೆ ಕುರಿತ ಮಾತನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವ ದೃಷ್ಟಿಕೋನವಿಟ್ಟುಕೊಂಡು ಹೇಳಿದ್ದಾರೋ ಗೊತ್ತಿಲ್ಲ. ರಾಜಕೀಯವಾಗಿ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಡೆದ ಪಾದಯಾತ್ರೆ ಹಾಗೂ ಹೋರಾಟಕ್ಕೆ ಸಮಾಜದ ಜನರು ಅಭೂತಪೂರ್ವವಾಗಿ ಬೆಂಬಲಿಸಿದ್ದಾರೆ. ಹೀಗಾಗಿಯೇ ಆದಷ್ಟು ಬೇಗ ನಮಗೆ 2ಎ ಮೀಸಲಾತಿ ಸಿಗುವ ವಿಶ್ವಾಸವಿದೆ. ಸಿಎಂ ಯಡಿಯೂರಪ್ಪ ಅವರು ಅಧಿವೇಶನದಲ್ಲಿ ಮಾತು ನೀಡಿದ್ದಾರೆ. ಅದು ದಾಖಲಾಗುತ್ತದೆ. ಹೀಗಾಗಿ ನಮ್ಮ ಸಮುದಾಯದ 2ಎ ಮೀಸಲಾತಿ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಸಮಾಜದ ಧೀಮಂತ ನಾಯಕ. ಅವರು ನಮ್ಮ ಹೋರಾಟಕ್ಕೆ ಬಂದ ಪರಿಣಾಮವಾಗಿ ಹೋರಾಟ ಒಂದು ದಡಕ್ಕೆ ಮುಟ್ಟುವುದಕ್ಕೆ ಸಾಧ್ಯವಾಯಿತು. ನಾವು ಹೊರಗೆ ಹೋರಾಟ ಮಾಡಿದರೆ ಯತ್ನಾಳ ಅವರು ಸದನದ ಒಳಗೆ ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ನಮ್ಮ ಪಾದಯಾತ್ರೆಯನ್ನು ನಿಲ್ಲಿಸುವುದಕ್ಕಾಗಿಯೇ ಮುರುಗೇಶ ನಿರಾಣಿ ಅವರಿಗೆ ಮಂತ್ರಿಸ್ಥಾನ ನೀಡುವ ಒಪ್ಪಂದವಾಗಿತ್ತು ಎಂದೆನಿಸುತ್ತದೆ.