ಕೊಪ್ಪಳ: ಜಾನುವಾರುಗಳಿಗೂ - ರೈತರಿಗೂ ಅವಿನಾಭಾವ ಸಂಬಂಧವಿರುತ್ತದೆ. ಹೀಗಾಗಿಯೇ ಜಾನುವಾರುಗಳನ್ನು ತಮ್ಮ ಮನೆಯ ಮಗಳಂತೆ ನೋಡಿಕೊಳ್ಳುತ್ತಾರೆ. ಅದರಂತೆ ಇಲ್ಲೊಂದು ಕುಟುಂಬ ಮನೆಯಲ್ಲಿನ ಹಸುವಿಗೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಸಂಭ್ರಮಿಸಿದೆ.
ಮನೆ ಮಗಳಂತಿದ್ದ ಹಸುವಿಗೂ ಶಾಸ್ತ್ರೋಕ್ತವಾಗಿ ನೆರವೇರಿತು ಸೀಮಂತ ಕಾರ್ಯಕ್ರಮ ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ಬಸವರಾಜ ಹಳ್ಳಿಕೇರಿ ಕುಟುಂಬ ತಮ್ಮ ಮನೆಯಲ್ಲಿನ ಹಸುವಿಗೆ ಸೀಮಂತ ಕಾರ್ಯಕ್ರಮ ಮಾಡಿ ಸಂಭ್ರಮಿಸಿದೆ. ಮೂರು ವರ್ಷದ ಈ ಹಸು ಇದೀಗ ಗರ್ಭಿಣಿ (8 ತಿಂಗಳು) ಯಾಗಿದೆ. ಮನೆಯ ಮಗಳಂತೆ ಭಾವಿಸಿ ಹಳ್ಳಿಕೇರಿ ಅವರ ಕುಟುಂಬ ಹಸುವಿಗೆ ಸೀಮಂತ ಕಾರ್ಯಕ್ರಮ ಮಾಡುವ ನಿರ್ಧಾರ ಮಾಡಿದ್ದು, ಇಂದು ಶಾಸ್ತ್ರೋಕ್ತವಾಗಿ ನೆರೆಹೊರೆಯವರನ್ನು ಆಹ್ವಾನಿಸಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಒಂದು ಹೆಣ್ಣು ಮಗಳಿಗೆ ಯಾವ ರೀತಿಯಾಗಿ ಸೀಮಂತ ಕಾರ್ಯಕ್ರಮ ಮಾಡಲಾಗುತ್ತದೆಯೋ ಅದೇ ರೀತಿ ಮನೆಯ ಮಗಳಂತಿರುವ ಈ ಹಸುವಿಗೂ ಹೊಸ ಸೀರೆ ಹೊದಿಸಿ, ಉಡಿ ತುಂಬಿ, ಆರತಿ ಬೆಳಗಿ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಇನ್ನೂ ಹಸುನಿನ ಸೀಮಂತ ಕಾರ್ಯಕ್ರಮಕ್ಕೆ ಬಂದ ನೆರೆಹೊರೆಯವರಿಗೆ ಸಿಹಿ ಹಾಗೂ ಉಪಹಾರ ವ್ಯವಸ್ಥೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ:"ನೀನು ಒಂಟಿಯಲ್ಲ"- ಮಲ್ಪೆ ಬೀಚ್ ಮರಳಲ್ಲಿ ಮೂಡಿದ ಜಾಗೃತಿ ಸಂದೇಶ
ರೈತರಾದ ನಾವು ಜಾನುವಾರುಗಳನ್ನು ಮನೆಯ ಸದಸ್ಯರಂತೆ ರಕ್ಷಣೆ ಮಾಡುತ್ತೇವೆ. ಮನೆಯಲ್ಲಿಯೇ ಜನಿಸಿದ್ದ ಈ ಆಕಳು ಕರು ಈಗ ಮೂರು ವರ್ಷದ್ದಾಗಿದ್ದು, 8 ತಿಂಗಳ ಗರ್ಭಿಣಿಯಾಗಿದೆ. ಇದರಿಂದ ಸಂತೋಷವಾಗಿ ನಾವು ಆಕಳಿಗೆ ಸೀಮಂತ ಮಾಡಿದ್ದೇವೆ ಎನ್ನುತ್ತಾರೆ ರೈತ ಬಸವರಾಜ ಹಳ್ಳಿಕೇರಿ ಅವರು.