ಕೊಪ್ಪಳ: ನವೆಂಬರ್ 8ರಿಂದ ಅಂಗನವಾಡಿ ಕೇಂದ್ರಗಳು ಆರಂಭವಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಈಗ ಅಂಗನವಾಡಿಗಳು ಇಲ್ಲದಿದ್ದರೂ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ನವೆಂಬರ್ 8ರಂದು ಅಂಗನವಾಡಿಗಳು ಆರಂಭವಾಗಲಿವೆ. ಅಂಗನವಾಡಿಗಳ ಆರಂಭಕ್ಕೆ ಸ್ವಚ್ಛತೆ, ಸ್ಯಾನಿಟೈಸರ್ ಮಾಡಲಾಗುವುದು ಎಂದರು.
ಅಂಗನವಾಡಿಗಳ ಪುನಾರಂಭ ಕುರಿತಂತೆ ಸಚಿವ ಹಾಲಪ್ಪ ಆಚಾರ್ ಹೇಳಿಕೆ ನೀಡಿರುವುದು.. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ಏರಿಕೆಯಾಗಿದೆ. ಅನಿವಾರ್ಯತೆಯಿಂದಾಗಿ ಬೆಲೆ ಏರಿಕೆಯಾಗಿದ್ದು, ಅದನ್ನ ಒಪ್ಪಿಕೊಳ್ಳಬೇಕಾಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವ ಎಂಬ ಸಚಿವ ಸೋಮಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್, ಅವರು ಹೇಳುವುದರಲ್ಲಿ ತಪ್ಪೇನಿಲ್ಲ. ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವು ದಿಗ್ಭ್ರಮೆ ಉಂಟು ಮಾಡಿದೆ ಎಂದು ಹೇಳಿದರು.
ಕೊಪ್ಪಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ :66ನೇ ಕನ್ನಡ ರಾಜ್ಯೋತ್ಸವವನ್ನು ಕೊಪ್ಪಳದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಚಿವ ಹಾಲಪ್ಪ ಆಚಾರ್ ಧ್ವಜಾರೋಹಣ ನೆರವೇರಿಸಿದರು.
ಪೊಲೀಸ್, ಗೃಹರಕ್ಷದಳ, ಎನ್ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ , ಸೇವಾದಳ ಸೇರಿದಂತೆ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಸಚಿವ ಹಾಲಪ್ಪ ಆಚಾರ್, ಕನ್ನಡನಾಡು ಉದಯವಾದ ಬಗ್ಗೆ ಹಾಗೂ ಕನ್ನಡದ ನಾಡಿನ ಸಂಸ್ಕೃತಿ, ಸಾಹಿತ್ಯ, ನಾಡಿನ ಹಿರಿಮೆ-ಗರಿಮೆಗಳ ಬಗ್ಗೆ ಮಾತನಾಡಿದರು.
ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಅಧಿಕಾರಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಓದಿ:MES ಪುಂಡರಿಗೆ ಬೆಳಗಾವಿ ಪೊಲೀಸರ ಮೂಗುದಾರ.. ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'..