ಗಂಗಾವತಿ (ಕೊಪ್ಪಳ) : ಹನುಮ ಜಯಂತಿ ನಿಮಿತ್ತ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 23 ಮತ್ತು 24 ರಂದು ನಡೆಯುವ ಹನುಮಮಾಲೆ ವಿಸರ್ಜನೆಗೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಾಡಿದ್ದ ಸಿದ್ಧತೆಗಳಿಗಿಂತ ಈ ಬಾರಿ ಚೆನ್ನಾಗಿ ಮಾಡುತ್ತೇವೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ ನಿಮಿತ್ತ ನಡೆಯುತ್ತಿರುವ ಸಿದ್ಧತೆಗಳನ್ನು ಮಂಗಳವಾರ ಶಾಸಕ ಜಿ. ಜನಾರ್ದನ ರೆಡ್ಡಿ, ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಪರಿಶೀಲಿಸಿದ ಸಚಿವ ರಾಮಲಿಂಗಾರೆಡ್ಡಿ ಬಳಿಕ ವಿರುಪಾಪುರಗಡ್ಡೆ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಂಜನಾದ್ರಿಯಲ್ಲಿ ಹನುಮಮಾಲಾಧಾರಿಗಳಿಗೆ ಎಲ್ಲಿಯೂ ಅಸೌಕರ್ಯ ಉಂಟಾಗದಂತೆ ಸಕಲ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಲಾಗಿದೆ. ಹನುಮಮಾಲೆ ವಿಸರ್ಜನೆಯನ್ನು ಕಳೆದ ಬಾರಿಗಿಂತಲೂ ಈ ಬಾರಿ ಚೆನ್ನಾಗಿ ಮಾಡಲಾಗುವುದು. ಇದಕ್ಕಾಗಿ ಭಕ್ತರ ದಟ್ಟಣೆ ನಿಯಂತ್ರಣಕ್ಕಾಗಿ ನಾಲ್ಕು ಕಂಟ್ರೋಲ್ ರೂಮ್ ಮಾಡಲಾಗಿದೆ. ವಿದ್ಯುತ್ ಅಲಂಕಾರ, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜನ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನೇಮಿಸಲಾಗಿದೆ. ಬೆಟ್ಟ ಹತ್ತುವ ಸಂದರ್ಭದಲ್ಲಿ ಯಾರಿಗಾದರೂ ಸಮಸ್ಯೆಯಾದರೆ ಅಗತ್ಯ ತುರ್ತ ಆರೋಗ್ಯ ಸೇವೆಗಾಗಿ ವೈದ್ಯರು, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.