ಕುಷ್ಟಗಿ (ಕೊಪ್ಪಳ): ಜಗಳ ಬಿಡಿಸಲು ಹೋದ ವೃದ್ಧೆಯೊಬ್ಬಳು ಪೆಟ್ಟು ಬಿದ್ದು ಕೊನೆಯುಸಿರೆಳೆದಿರುವ ದಾರುಣ ಘಟನೆ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ನಡೆದಿದೆ. ನಾಗಮ್ಮ ದುರಗಪ್ಪ ತೆಗ್ಗಿನಮನಿ (60) ಮೃತ ವೃದ್ಧೆ ಎಂದು ಗುರುತಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಆಗಿರುವ ಜಗಳವನ್ನು ಬಿಡಿಸಲು ಹೋದ ವೃಧ್ಧೆಯನ್ನು ಕುಡಿದ ಮತ್ತಿನಲ್ಲಿದ್ದ ಯುವಕ ಎತ್ತಿ ನೆಲಕ್ಕೆ ಒಗೆದಿದ್ದ. ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ನಾಗಮ್ಮ 37 ದಿನಗಳ ಬಳಿಕ ಮೃತಪಟ್ಟಿದ್ದಾಳೆ. ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮೈಸೂರು ; ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ ಆತ್ಮಹತ್ಯೆಗೆ ಶರಣು
ಡಿ.12 ರಂದು ವೃದ್ಧೆಯ ಪುತ್ರ ಹೊಳೆಯಪ್ಪ ತಮ್ಮ ಮನೆಯ ಮುಂದೆ ಚಿಕನ್ ಕಡಿಯುತ್ತಿದ್ದಾಗ ಲಕ್ಷ್ಮಣ ಮತ್ತು ಸಂತೋಷ ಎಂಬ ಸಹೋದರರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರು. ಜಗಳ ನಿಲ್ಲಿಸಲು ಬಂದ ನಾಗಮ್ಮಳನ್ನು ಸಂತೋಷ ಎತ್ತಿ ನೆಲಕ್ಕೆ ಒಗೆದಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ ನಾಗಮ್ಮಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹೆಚ್ಚಿನ ಚಿಕಿತ್ಸೆಗಾಗಿ ಇಲಕಲ್ ಖಾಸಗಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ವೃದ್ಧೆ ಮನೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಜಗಳದ ವೇಳೆ ಗಂಡನನ್ನು ಬಿಡಿಸಲು ಬಂದ ಪತ್ನಿ ಮಲ್ಲಮ್ಮಳ ಮೇಲೂ ಹಲ್ಲೆ ನಡೆದಿದೆ. ಪ್ರಕರಣದ ಸಂಬಂಧ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಲಕ್ಷ್ಮಣ ಹಾಗೂ ಸಂತೋಷನನ್ನು ಬಂಧಿಸಲಾಗಿದೆ.