ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರದ್ದು ಎನ್ನಲಾದ ಫೇಸ್ಬುಕ್ ಪೋಸ್ಟ್ವೊಂದು ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ. ತಮ್ಮ ನಿವಾಸದಲ್ಲಿ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದೆ ಎಂದು ಪೋಸ್ಟ್ ಮಾಡಿರುವುದು ಕುತೂಹಲ ಮೂಡಿಸಿದೆ.
ಚರ್ಚೆಗೆ ಗ್ರಾಸವಾಯ್ತು ಡಿಕೆಶಿ ಹಾಕಿದ್ದಾರೆ ಎನ್ನಲಾದ ಪೋಸ್ಟ್..! ಸಂಸದ ಸಂಗಣ್ಣ ಕರಡಿ ಸ್ಪಷ್ಟನೆ ಏನು? - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಕಿದ್ದಾರೆ ಎನ್ನಲಾದ ಫೇಸ್ಬುಕ್ ಪೋಸ್ಟ್ವೊಂದು ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪೋಸ್ಟ್ನಲ್ಲಿ ಸಂಗಣ್ಣ ಕರಡಿ ಅವರ ಹೆಸರು ಪ್ರಸ್ತಾಪವಾಗಿರುವುದು ಗೊಂದಲದ ಜೊತೆ ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ ಡಿಕೆಶಿ ಅವರ ಫೇಸ್ಬುಕ್ನಿಂದ ಈ ಪೋಸ್ಟ್ ಕಾಣೆಯಾಗಿದೆ.
ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಂಸದ ಕರಡಿ, ನಾನು ದೆಹಲಿಯಲ್ಲಿದ್ದೇನೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಡಿ.ಕೆ ಶಿವಕುಮಾರ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಫೋಟೋದಲ್ಲಿ ಸಂಗಣ್ಣ ಕರಡಿ ಅವರು ಇರಲಿಲ್ಲ. ಬದಲಾಗಿ ರಾಯಚೂರು ಜಿಲ್ಲೆಯ ಶಾಸಕರಾದ ಡಿ.ಎಸ್. ಹೂಲಗೆರೆ ಹಾಗೂ ಬಸನಗೌಡ ದದ್ದಲ ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಡಿ ಕೆ ಶಿವಕುಮಾರ್ ಕಣ್ತಪ್ಪಿನಿಂದ ಸಂಗಣ್ಣ ಹೆಸರು ಹಾಕಿದ್ದಾರೋ ಅಥವಾ ಡಿಕೆಶಿ ಹೆಸರಲ್ಲಿ ಫೇಕ್ ಅಕೌಂಟ್ ಮೂಲಕ ಈ ಸಂದೇಶ ಹರಡಲಾಗಿದೆಯಾ ಎಂಬುದು ನಿಗೂಢವಾಗಿದೆ.