ಗಂಗಾವತಿ:ವಿಧಾನಸಭಾ ಚುನಾವಣೆಗೆ ಗಂಗಾವತಿಯ ಅಖಾಡದಿಂದ ಸ್ಪರ್ಧಿಸಬೇಕಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ತಾವು ಸಲ್ಲಿಸಿದ್ದ ನಾಮಪತ್ರಕ್ಕೆ ಸಹಿ ಹಾಕುವುದನ್ನೇ ಮರೆತು ಎಡವಟ್ಟು ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ.
ಪಕ್ಷೇತರ ಅಭ್ಯರ್ಥಿ ನಾಮಪತ್ರ ಅಸಿಂಧು:ದೇವಪ್ಪ ಎಂಬ ವ್ಯಕ್ತಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರಗಳ ಕ್ರಮಬದ್ಧತೆ ಪರಿಶೀಲಿಸುವ ಸಂದರ್ಭದಲ್ಲಿ ನಾಮಪತ್ರಕ್ಕೆ ಈ ವ್ಯಕ್ತಿ ಸಹಿ ಮಾಡದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಧಿಕಾರಿಗಳು ನಾಮಪತ್ರ ಅಸಿಂಧುಗೊಳಿಸಿದ್ದಾರೆ. ಜೊತೆಗೆ ಗಂಗಾವತಿಯ ಅಖಾಡದಿಂದ ಸ್ಪರ್ಧೆ ಮಾಡಲು ಬಯಸಿದ್ದ ಬೆಂಗಳೂರು ಮೂಲದ ಗೀತಾ ಎಂಬುವವರು ತಮ್ಮ ವಿಳಾಸದ ದೃಢೀಕೃತ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆ, ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ.
ಕ್ರಮಬದ್ಧವಾಗಿವೆ 31 ನಾಮಪತ್ರಗಳು:ಗಂಗಾವತಿಯಲ್ಲಿ ಒಟ್ಟು 33 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ಎರಡು ತಿರಸ್ಕೃತವಾಗಿವೆ. ಉಳಿದಂತೆ 31 ನಾಮಪತ್ರ ಕ್ರಮಬದ್ಧವಾಗಿವೆ. ಇದರಲ್ಲಿ ಓರ್ವ ಮಹಿಳೆ ಕಣದಲ್ಲಿ ಉಳಿದುಕೊಂಡಿದ್ದಾರೆ. ಎಂಟು ಜನ ಪಕ್ಷೇತರರರು ಸೇರಿದಂತೆ ಒಟ್ಟು 31 ನಾಮಪತ್ರಗಳು ಅಂಗೀಕಾರವಾಗಿವೆ.
ಚುನಾವಣಾ ಅಧಿಕಾರಿಗಳಿಂದ ದೂರು ದಾಖಲು:ಚುನಾವಣಾ ನೀತಿ ಸಂಹಿತೆ ಉಲ್ಲಂಘಿನೆ ಮಾಡಿ ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಆರೋಪದ ಅಡಿ ಏ.20ರಂದು ಮತ್ತೆರಡು ಪಕ್ಷಗಳ ಸ್ಥಳೀಯ ಅಧ್ಯಕ್ಷರ ಮೇಲೆ ಚುನಾವಣಾ ಅಧಿಕಾರಿಗಳು ದೂರು ದಾಖಲು ಮಾಡಿದ್ದಾರೆ. ನಗರದಲ್ಲಿ ಏ.19ರಂದು (ಬುಧವಾರ) ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಅವರ ಬೃಹತ್ ರೋಡ್ ಶೋ ಮಾಡಿದ್ದರು. ಈ ಸಮಯದಲ್ಲಿ 8ರಿಂದ 10ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡು ಅವರಿಗೆ ಪಕ್ಷದ ಧ್ವಜ ಕೊಟ್ಟು, ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.