ಕೊಪ್ಪಳ:ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಮೂರು ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು ತಗುಲಿದ್ದು, ತಾಯಿಯ ಸ್ಥಿತಿ ಸಂದಿಗ್ಧವಾಗಿದೆ. ಇನ್ನೊಂದು ಪ್ರಕರಣದಲ್ಲಿ ಸೋಂಕು ತಾಯಿಗೆ ತಗುಲಿ ಸುಮಾರು 10 ತಿಂಗಳ ಮಗುವಿನ ಸ್ಥಿತಿ ಮನಕಲುಕುವಂತೆ ಮಾಡಿದೆ.
ಸೋಂಕು ತಗುಲಿರುವ ಮಗುವಿಗೆ ತಾಯಿ ಸುರಕ್ಷತೆಯ ಸಾಧನಗಳೊಂದಿಗೆ ತನ್ನ ಮಗುವಿನೊಂದಿಗೆ ಇರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮಗು ಕೇವಲ ಮೂರು ವರ್ಷ ಆಗಿರುವುದರಿಂದ ತಾಯಿಯನ್ನು ಬಿಟ್ಟು ಇರುವುದಿಲ್ಲ. ಮಗುವಿಗೆ ಊಟ ಮಾಡಿಸಲು, ಅದರ ನಿತ್ಯಕರ್ಮಗಳನ್ನು ಪೂರೈಸಲು ತಾಯಿಯ ಅಗತ್ಯತೆ ಇದೆ. ಹೀಗಾಗಿ ತಾಯಿ ತನ್ನ ಮಗುವಿನೊಂದಿಗೆ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿದ್ದಾಳೆ. ಮಗುವಿನ ಬಳಿ ಇರುವುದರಿಂದ ಎನ್ 95 ಮಾಸ್ಕ್ ಹಾಗೂ ಇನ್ನಿತರೆ ಸುರಕ್ಷಿತ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಆದರೆ, ಮಗುವನ್ನು ಒಂಟಿಯಾಗಿ ಆಸ್ಪತ್ರೆಯಲ್ಲಿ ಬಿಟ್ಟರೆ ಮಗು ಇನ್ನಷ್ಟು ಮಾನಸಿಕವಾಗಿ ಕುಗ್ಗುತ್ತದೆ ಎಂಬ ಕಾರಣಕ್ಕೆ ಕೊರೊನಾ ಸೋಂಕಿನ ಭೀತಿಯ ನಡುವೆ ತಾಯಿಯೂ ಇರಬೇಕಾದ ಅನಿವಾರ್ಯತೆ ಇದೆ.