ಗಂಗಾವತಿ: ಈ ಬಾರಿ ಸರ್ಕಾರದ ಮಾರ್ಗಸೂಚಿ ಅನ್ವಯ 5 ಅಡಿಗಿಂತಲೂ ಹೆಚ್ಚಿನ ಗಾತ್ರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಆದರೆ, ಸರ್ಕಾರದ ನಿಯಮ ಮೀರದೆಯೂ ಶಾಲೆಯೊಂದರ ಆವರಣದಲ್ಲಿ 20 ಅಡಿಯ ವಿನಾಯಕನ ಸೃಷ್ಟಿಸಿ ಗಮನ ಸೆಳೆದಿದೆ.
ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಕೊರೊನಾ ಹಿನ್ನೆಲೆ, ಸರಳ ಆಚರಣೆಯ ಉದ್ದೇಶಕ್ಕೆ ಶಾಲಾ ಮಕ್ಕಳ ಕೊರತೆಯ ಮಧ್ಯೆಯೂ ಸಿಬ್ಬಂದಿ ಪರಿಸರ ಸ್ನೇಹಿ ವಿನಾಯಕನ ರಚಿಸಿ, ಗಮನ ಸೆಳೆದಿದ್ದಾರೆ.
ಶಾಲಾ ಆವರಣದಲ್ಲಿ ಸುಮಾರು 20 ಅಡಿ ಗಾತ್ರದಲ್ಲಿ ಭತ್ತದ 500 ಸಸಿಗಳ ಕಟ್ಟು ಬಳಸಿ, ವಿನಾಯಕನ ರೂಪ ರಚಿಸುವ ಮೂಲಕ ಅಲಂಕಾರ ಮಾಡಿದ್ದಾರೆ. ಇದು ಜನರನ್ನು ಆಕರ್ಷಿಸುತ್ತದೆ. ಹಬ್ಬದ ಬಳಿಕ ವಿನಾಯಕನಿಗೆ ಮಾಡಲಾದ ಸಸ್ಯಾಲಂಕಾರ ತೆಗೆದು ವ್ಯರ್ಥ ಮಾಡದೇ ಭತ್ತದ ಗದ್ದೆಯಲ್ಲಿ ಮರು ನಾಟಿ ಮಾಡಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎನ್.ಸೂರಿಬಾಬು ಹೇಳಿದರು.
ಕಲಾ ಶಿಕ್ಷಕ ವಿನೋದ ನೇತೃತ್ವದಲ್ಲಿ ಸಸ್ಯಾಲಂಕೃತ ಗಣೇಶನನ್ನು ತಯಾರಿಸಲಾಗಿದೆ. ಸಸ್ಯಾಲಂಕಾರ ತೆಗೆದ ನಂತರ ಭತ್ತದ ಗದ್ದೆಯಲ್ಲಿ ಮರು ನಾಟಿ ಮಾಡಲಾಗುವುದು' ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎನ್. ಸೂರಿಬಾಬು ಹೇಳಿದ್ದಾರೆ.