ಗಂಗಾವತಿ (ಕೊಪ್ಪಳ) :ಧಾರ್ಮಿಕ ಆಚರಣೆ, ಭಕ್ತಿ ಭಾವದಲ್ಲಿ ನಂಬಿಕೆ ಇಡುವ ಭಕ್ತರು ಎಂತಹ ಕಠೀಣ ವ್ರತಾ ಆಚರಣೆಗಾದರೂ ಸೈ ಎನ್ನುತ್ತಾರೆ. ಮುಖ್ಯವಾಗಿ ಅಯ್ಯಪ್ಪನ ಭಕ್ತರು ಅತ್ಯಂತ ಕಠಿಣ ವ್ರತಾಚಾರಣೆ ಮಾಡಿ ಇರುಮುಡಿ ಹೊತ್ತು ಶಬರಿಮಲೆಗೆ ಹೋಗಿ ಸಂಕ್ರಾಂತಿಯಂದು ಕಾಣುವ ಜ್ಯೋತಿ ದರ್ಶನ ಮಾಡಿ ಪುನಿತರಾಗುತ್ತಾರೆ.
ಇದರ ಭಾಗವಾಗಿ ನಗರದ ಹತ್ತಕ್ಕೂ ಹೆಚ್ಚು ಅಯ್ಯಪ್ಪನ ಭಕ್ತರು, ಕೇವಲ ಕಾಲ್ನಡಿಗೆಯ ಮೂಲಕವೇ 1050 ಕಿ.ಮೀ. ದೂರದಲ್ಲಿರುವ ಕೇರಳ ರಾಜ್ಯದ ಶಬರಿಮಲೆಗೆ ತೆರಳಿದ್ದು, ಅಯ್ಯಪ್ಪನ ದರ್ಶನ ಮಾಡುವ ಸಂಕಲ್ಪ ಹೊಂದಿದ್ದಾರೆ. ಕಿರಣ್ ಕುಮಾರ ಈಡಿಗ ಎಂಬ ಗುರುಸ್ವಾಮಿ ನೇತೃತ್ವದಲ್ಲಿ ನಗರದ ಹನುಮೇಶ ತೆಗ್ಗಿನಮನಿ, ರಾಜಾಸಿಂಗ್, ಮೋಹನ್ ನಾಯಕ್, ಚೇತನ ಕುಮಾರ್, ಚಿಕ್ಕಮಾದಿನಾಳ ಶೇಖರಗೌಡ, ಸಂಗಾಪುರ ವೀರಣ್ಣ, ಭೀಮೇಶ, ಹೇಮಂತ ಹಗರಿಬೊಮ್ಮನಹಳ್ಳಿ, ಗುರು ಪಾದಯಾತ್ರೆ ಮೂಲಕ ತೆರಳಿದ್ದಾರೆ.
ಕಿರಣ್ಕುಮಾರ ಈಡಿಗ ಗುರುಸ್ವಾಮಿಗೆ ಇದು ಆರನೇ ವರ್ಷದ ಕಾಲ್ನಡಿಗೆ ಪಾದಯಾತ್ರೆಯಾಗಿದ್ದು, ಹನುಮೇಶ ತೆಗ್ಗಿನಮನಿ ಎರಡನೇ ವರ್ಷದ ಪಾದಯಾತ್ರೆಯಾಗಿದೆ. ಸ್ವಾಮಿಗಳು ದಿನಕ್ಕೆ 35 ರಿಂದ 40 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. 1050 ಕಿ.ಮೀ. ಅಂತರದ ಯಾತ್ರೆಯನ್ನು 28 ದಿನದಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆರಲಿದ್ದಾರೆ. ಜ.15ರಂದು ಶಬರಿಮಲೆ ಬೆಟ್ಟದಲ್ಲಿ ಕಾಣಿಸಿಕೊಳ್ಳಲಿರುವ ಜ್ಯೋತಿಯ ದರ್ಶನ ಮಾಡಿಕೊಂಡು ಯಾತ್ರಾರ್ಥಿಗಳು ವಾಪಾಸ್ ಬರಲಿದ್ದಾರೆ.