ಕೋಲಾರ: ಇಲ್ಲಿನ ಡಿಸಿಸಿ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಹಗರಣ ಮುಚ್ಚಿಹಾಕಲು ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ. ಸಹಕಾರಿ ಸಚಿವ ಸೋಮಶೇಖರ್ ಅವರಿಗೆ ಸಿದ್ದರಾಮಯ್ಯ ಒತ್ತಡ ಹಾಕಿ, ಅವ್ಯವಹಾರವನ್ನು ಮುಚ್ಚಿಹಾಕಲು ಸಿದ್ದರಾಮಯ್ಯ ಕುಮ್ಮಕ್ಕು ನೀಡಿದ್ದು, ಕಳ್ಳರ ಟೀಂಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೋಲಾರ ಡಿಸಿಸಿ ಬ್ಯಾಂಕ್ನ ಭ್ರಷ್ಟಾಚಾರದ ಪಿತಾಮಹ ಮಾಜಿ ಸಿಎಂ. ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಇದೇ ಫೆ.13 ರಂದು ಕೋಲಾರ ತಾಲೂಕು ವೇಮಗಲ್ನಲ್ಲಿ ಮಹಿಳಾ ಸಮಾವೇಶ ಮಾಡುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾನು ಮಾಡಿದ ಭ್ರಷ್ಟಾಚಾರದ ಹಣದಲ್ಲಿ ಕೊಡುಗೆ ಕೊಡುತ್ತಿದ್ದಾರೆ" ಎಂದು ವರ್ತೂರು ಪ್ರಕಾಶ್ ದೂರಿದ್ದಾರೆ.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬ್ಯಾಂಕ್ ಹಣ ಬಳಕೆ ಆರೋಪ:"ಡಿಸಿಸಿ ಬ್ಯಾಂಕ್ನಲ್ಲಿ ಒಂದಲ್ಲ ಎರಡಲ್ಲ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಹಗರಣದ ಹಣದಿಂದಲೇ ಕಾರ್ಯಕ್ರಮ ಮಾಡುತ್ತಿದ್ದಾರೆ. ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಕಾರ್ಯಕ್ರಮಕ್ಕೆ ಬರುವವರಿಗೆ ರೇಷ್ಮೆ ಸೀರೆ, ಚಿನ್ನದ ಮೂಗುತಿ, ತಲಾ ಐದುನೂರು ರೂಪಾಯಿ ಕೊಡುಗೆ ನೀಡುತ್ತಿದ್ದಾರೆ. ಈಗಾಗಲೇ ಸ್ವಸಹಾಯ ಸಂಘಗಳ ಸಭೆ ಮಾಡಿ ಮೌಕಿಕ ಆದೇಶ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಮಹಿಳೆಯನ್ನು ಸೇರಿಸುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ಕ್ಷೇತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ" ಎಂದು ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.