ಕೋಲಾರ :ಜಿಲ್ಲೆಯ ಮಾಲೂರು ತಾಲೂಕು ಕೊಮ್ಮನಹಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ಮಂಜುನಾಥ್ ಎಂಬುವರಿಗೆ ಸೇರಿದ ಕಲ್ಲಿಕ್ವಾರಿ ಸಂಖ್ಯೆ 1,022 ರಲ್ಲಿ ಬ್ಲಾಸ್ಟಿಂಗ್ ವೇಳೆ ಬಿಹಾರ ಮೂಲದ ರಾಕೇಶ್ ಸಾಣೆ ಎಂಬಾತ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಕ್ವಾರಿ ಮಾಲೀಕರು ಹಾಗೂ ಸ್ಥಳೀಯ ಕೆಲವು ಪ್ರಭಾವಿಗಳು ಪ್ರಕರಣವನ್ನು ಅಪಘಾತ ಎಂದು ತಿರುಚಿ ಲಾರಿ ಹರಿದು ಸಾವನ್ನಪ್ಪಿದ್ದಾನೆ ಎಂದು ಮಾಸ್ತಿ ಪೊಲೀಸರಿಗೆ ದೂರು ಕೊಟ್ಟು, ರಾತ್ರೋ ರಾತ್ರಿ ಶವದ ಮರಣೋತ್ತರ ಪರೀಕ್ಷೆ ಮುಗಿಸಿ ಪ್ರಕರಣವನ್ನು ಮುಗಿಸಲು ಪ್ರಯತ್ನಿಸಿದ್ದಾರೆ.
ಆದರೆ ಬೆಳಗ್ಗೆ ವೇಳೆಗೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಇಲ್ಲಿ ಏನೋ ಮುಚ್ಚಿಡಲಾಗುತ್ತಿದೆ ಎಂದು ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಶವವನ್ನು ಪರಿಶೀಲನೆ ನಡೆಸಿದಾಗ ಶವದ ಮೇಲೆ ಸುಟ್ಟಗಾಯಗಳಾಗಿರುವುದ ಕಂಡು ಬಂದಿದೆ. ಪರಿಣಾಮ ಘಟನೆ ನಡೆದ ಕೊಮ್ಮನಹಳ್ಳಿಯ ಮಂಜುನಾಥ್ ಅವರ ಕ್ವಾರಿ ಇದ್ದ ಸ್ಥಳಕ್ಕೆ ಎಸ್ಪಿ ದೇವರಾಜ್, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಎಫ್ಎಸ್ಎಲ್ ತಂಡ, ಬಾಂಬ್ ಪರಿಶೀಲನಾ ತಂಡ ಹಾಗೂ ಶ್ವಾನ ದಳ ಕೂಡಾ ಪರಿಶೀಲನೆ ನಡೆಸಿತು.
ಕೂಲಂಕಷ ತನಿಖೆ : ಈ ವೇಳೆ ಮಾತನಾಡಿದ ಐ ಜಿ ಚಂದ್ರಶೇಖರ್ ಪ್ರಕರಣವನ್ನು ತಿರುಚುವ ಪ್ರಯತ್ನ ನಡೆದಿದೆ ಹಾಗಾಗಿ ಇದರಲ್ಲಿ ಪ್ರಕರಣವನ್ನು ಸಂಪೂರ್ಣವಾಗಿ ಕೂಲಂಕಷ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಕಲ್ಲು ಕ್ವಾರಿ ಮಾಲೀಕ, ಬ್ಲಾಸ್ಟಿಂಗ್ ಪರವಾನಗಿ ಹೊಂದಿರುವವರು ಮತ್ತು ಗಾಯಗೊಂಡಿರುವವರು ಎಲ್ಲರ ಹೇಳಿಕೆ ಪಡೆದ ನಂತರ ಪ್ರಕರಣದ ನಿಜಾಂಶ ತಿಳಿಯಲಿದೆ ಎಂದರು.
ರಾಜಕೀಯ ತಿರುವು : ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅವರ ಒಡೆತನದ ನಂಜುಂಡೇಶ್ವರ ಸ್ಟೋನ್ ಕ್ರಶರ್ಸ್ ಕೂಡಾ ಇದೆ. ಹಾಗಾಗಿ ಇಡೀ ಪ್ರಕರಣ ರಾಜಕೀಯ ತಿರುವನ್ನು ಪಡೆದುಕೊಂಡಿತ್ತು. ಮೇಲಿಂದ ಮೇಲೆ ಹೈಡ್ರಾಮಗಳು ನಡೆಯಲು ಶುರುವಾಯಿತು.