ಕೋಲಾರ:ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆಗಳು ನಡೆಯುತ್ತಿದ್ದು, ಇಂದು ಕೋಲಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಣುಕು ಪರೀಕ್ಷಾ ಸಿದ್ಧತೆಯನ್ನು ನಡೆಸಿದ್ರು. ಡಿಡಿಪಿಐ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಂಡು, ಹೇಗೆ ಪರೀಕ್ಷೆ ನಡೆಸಬೇಕು ಎಂಬ ನಿಟ್ಟಿನಲ್ಲಿ ನರಸಾಪುರ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಪರೀಕ್ಷಾ ಪ್ರಾತ್ಯಕ್ಷಿಕೆ ನಡೆಸಿದ್ರು.
ಈ ವೇಳೆ ನೂರಾರು ಮಕ್ಕಳನ್ನು ಕರೆಸಿ ಸ್ಯಾನಿಟೈಸರ್, ಸಾಮಾಜಿಕ ಅಂತರ, ಮಾಸ್ಕ್ಗಳನ್ನು ಬಳಸಿಕೊಂಡು ಸೋಂಕು ಹರಡದಂತೆ, ಮಕ್ಕಳಿಗೂ ಗಾಬರಿಯಾಗದ ರೀತಿಯಲ್ಲಿ ಹೇಗೆ ಪರೀಕ್ಷೆ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಮಾಡಿದ್ರು.
ಈ ವೇಳೆ ಮಕ್ಕಳು ಶಾಲಾ ಆವರಣಕ್ಕೆ ಪ್ರವೇಶ ಮಾಡಿದಾಗಿನಿಂದ ಪರೀಕ್ಷೆ ಬರೆದು ಹೊರ ಹೋಗುವವರೆಗೂ, ಹಂತ ಹಂತವಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋಲಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆ ಶಾಲಾ ಆವರಣ ಪ್ರವೇಶ ಮಾಡುತ್ತಿದ್ದಂತೆ ಮೊದಲು ಸಾಮಾಜಿ ಅಂತರದ ಬಾಕ್ಸ್ನಲ್ಲಿ ನಿಲ್ಲಬೇಕು, ನಂತರ ಖಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್ ಬಳಸಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಮಾಡಬೇಕು. ಅಲ್ಲಿಯೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡು, ಮಕ್ಕಳು ಒಬ್ಬರನ್ನೊಬ್ಬರು ಮುಟ್ಟದಂತೆ ಅವರ ವಸ್ತುಗಳನ್ನು ಮತ್ತೊಬ್ಬರು ಮುಟ್ಟದಂತೆ ಸೂಚನೆ ನೀಡಲಾಗಿದೆ.
ಕುಡಿಯುವ ನೀರು ಹಾಗೂ ಶೌಚಾಲಯದಲ್ಲೂ ಪ್ರತ್ಯೇಕ ವ್ಯವಸ್ಥೆ ಮಾಡಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ಮಾಡಲು ಸಿದ್ಧವಾಗುತ್ತಿದ್ದಾರೆ ಅಧಿಕಾರಿಗಳು. ಜಿಲ್ಲೆಯಲ್ಲಿ 20,900 ವಿದ್ಯಾರ್ಥಿಗಳಿದ್ದು 70 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಪ್ರತಿ ತಾಲೂಕಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ.
ಪರೀಕ್ಷೆಗೆ ಹುಷಾರಿಲ್ಲದ ಮಕ್ಕಳು ಬಂದಲ್ಲಿ ಅವರನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲು ಸದ್ಧತೆ ಮಾಡಿಕೊಂಡಿದ್ದಾರೆ. ಹೀಗೆ ಕೊರೊನಾ ಆತಂಕದ ನಡುವೆಯೂ ಶಿಕ್ಷಣ ಇಲಾಖೆ ಪರೀಕ್ಷಾ ಸಿದ್ದತೆ ಮಾಡಿಕೊಂಡಿದೆ.
ಈ ಬಗ್ಗೆ ವಿದ್ಯಾರ್ಥಿಗಳು ಕೂಡಾ ಸಾಕಷ್ಟು ಆತಂಕ ಮತ್ತು ಭಯದಲ್ಲೇ ಪರೀಕ್ಷೆ ಬರೆಯಲು ಅಣಿಯಾಗಿದ್ದಾರೆ. ಸಾಕಷ್ಟು ಗೊಂದಲಗಳ ನಡುವೆ ಹತ್ತನೇ ತರಗತಿ ಪರೀಕ್ಷೆಗಾಗಿ ಸಿದ್ಧತೆಗಳನ್ನು ಮಾಡಿಕೊಂಡಿರುವ ಶಿಕ್ಷಣ ಇಲಾಖೆ, ಕೊರೊನಾ ಆತಂಕದ ನಡುವೆ ಯಾವುದೇ ತೊಂದರೆಯಾಗದಂತೆ ಈ ಪರೀಕ್ಷೆ ಅನ್ನೋ ಸವಾಲನ್ನು ಹೇಗೆ ಗೆಲ್ಲುತ್ತಾರೆ ಅನ್ನೋದೆ ಎಲ್ಲರ ಕುತೂಹಲವಾಗಿದೆ.