ಕೋಲಾರ: ಬಿಜೆಪಿಯಿಂದ ಆಯೋಜನೆ ಮಾಡಿದ್ದ ಜನೋತ್ಸವ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ ಭಾನುವಾರ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅಭಿನಂದನಾ ಸಮಾರಂಭವನ್ನು ಕೋಲಾರದಲ್ಲಿ ಆಯೋಜನೆ ಮಾಡಲಾಗಿತ್ತು. ಕೋಲಾರ ತಾಲೂಕಿನ ಕೆಂದಟ್ಟಿ ಬಳಿ ಸುಮಾರು1,500 ಜನ ಕಾರ್ಯಕರ್ತರಿಗೆ ಸಚಿವ ಮುನಿರತ್ನ ಬಿರಿಯಾನಿ ಬಾಡೂಟ ಹಾಕಿಸಿದರು.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1,500 ಜನ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮುನಿರತ್ನ ಅವರನ್ನು ತೆರೆದ ವಾಹನದಲ್ಲಿ ಪಟಾಕಿ ಸಿಡಿಸಿ, ಸೇಬಿನ ಹಾರ ಹಾಕಿ ಕರೆತಂದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುನಿರತ್ನ ಅವರಿಗೆ ಕಂಬಳಿ ಹೊದಿಸಿ, ಕುರಿಮರಿ ಉಡುಗೆಯಾಗಿ ನೀಡಿದರು.