ಕೋಲಾರ/ತುಮಕೂರು:ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು ಮೂರು ಜನ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಗಾಯಾಳುಗಳನ್ನು ಆಯಾ ಜಿಲ್ಲೆಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಕೋಲಾರದ ಬಳಿ ರಸ್ತೆ ಅಪಘಾತ: ಹಿಂಬದಿಯಿಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹುಣಸೂರು ಅಬಕಾರಿ ಇಲಾಖೆ ಡಿಎಸ್ಪಿ ವಿಜಯ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಗಾಯಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೋಲಾರದ ಗಡಿ ಆಂಧ್ರದಲ್ಲಿ ನಡೆದಿದೆ.
ಕೋಲಾರದ ಗಡಿ ಭಾಗವಾದ ಆಂಧ್ರಪ್ರದೇಶದ ಪಲಮನೇರು ತಾಲೂಕಿನ ಜಗಮರ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಅಬಕಾರಿ ಡಿಎಸ್ಪಿ ವಿಜಯ್ ಕುಮಾರ್ ಅವರ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಹಿಂತಿರುಗುವ ವೇಳೆ ಲಾರಿಯೊಂದರ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಡಿಎಸ್ಪಿ ತಂದೆ ಗಿರಿಗೌಡ ಸಾವನ್ನಪ್ಪಿದ್ದಾರೆ.
ಇನ್ನು ಡಿಎಸ್ಪಿ ವಿಜಯ್ ಕುಮಾರ್ ಅವರಿಗೆ ಎರಡೂ ಕಾಲುಗಳು ಮುರಿದಿದ್ದು, ಅವರ ತಾಯಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಪಘಾತಕ್ಕೊಳಗಾದ ವಿಜಯ್ ಕುಮಾರ್ ಸದ್ಯ ರಾಜ್ಯದ ಹುಣಸೂರು ಅಬಕಾರಿ ಡಿಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಘಟನೆ ಸಂಬಂಧ ಆಂಧ್ರಪ್ರದೇಶದ ಪಲಮನೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಅಪಘಾತದಲ್ಲಿ ಇಬ್ಬರು ಸಾವು: ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಇಂದು ಬೆಳಗಿನ ಜಾವ ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಟಾಟಾ ಏಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಲಬುರಗಿ ಜಿಲ್ಲೆಯ ಅರಳಗುಡಿ ಗ್ರಾಮದ ಭೀಮಾಬಾಯಿ (70), ಮಹಾಂತಪ್ಪ (50) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಇವರ ಕುಟುಂಬ ನಿವೃತ್ತಿಯ ಬಳಿಕ ಸ್ವಗ್ರಾಮಕ್ಕೆ ಮನೆಯ ಸಾಮಗ್ರಿ ಸಾಗಿಸುವ ವೇಳೆ ಈ ಅಪಘಾತ ಸಂಭವಿಸಿದೆ.
ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಈ ವೇಳೆ, ಮುಂದೆ ಹೋಗುತ್ತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಟಾಟಾ ಏಸ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಹಾಗೂ ಬಸ್ ನಡುವೆ ಸಿಲುಕಿದ್ದ ಟಾಟಾ ಏಸ್ ನಜ್ಜುಗುಜ್ಜಾಗಿದೆ. ಗಾಯಾಳುಗಳಿಗೆ ಕಳ್ಳಂಬೆಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತ ಹಿನ್ನೆಲೆ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ವ್ಯತ್ಯಯ ಉಂಟಾಗಿದ್ದು, ಕಳ್ಳಂಬೆಳ್ಳ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಅನುಮಾನ ಭೂತಕ್ಕೆ ಎರಡು ಬಲಿ.. ಪತ್ನಿ ಕೊಂದು ಪೊಲೀಸ್ ಠಾಣೆಗೆ ಶರಣಾಗಲು ತೆರಳುತ್ತಿದ್ದ ಪತಿ ಸಾವು!