ಕೋಲಾರ : ಕೆಜಿಎಫ್ ಅಧೀಕ್ಷಕರ ಹುದ್ದೆ ಹಾಗೂ ಕೆಜಿಎಫ್ ಕಚೇರಿ ಸ್ಥಳಾಂತರ ವದಂತಿ ಹಿನ್ನೆಲೆ ಇಂದು ವಿವಿಧ ಸಂಘಟನೆಗಳಿಂದ ಕೆಜಿಎಫ್ ಬಂದ್ಗೆ ಕರೆ ನೀಡಲಾಗಿದೆ. ಅದರಂತೆ ಕೆಜಿಎಫ್ ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ರಾಜೇಂದ್ರನ್ ಸೇರಿದಂತೆ, ವಿವಿಧ ಸಂಘಟನೆಗಳ ಮುಖಂಡರು ಬಂದ್ಗೆ ಕರೆ ನೀಡಿದ್ದರೂ, ಇದುವರೆಗೂ ಯಾವುದೇ ಸಂಘಟನೆಯವರು ರಸ್ತೆಗಿಳಿದಿಲ್ಲ. ಇನ್ನು ಖಾಸಗೀ ಬಸ್ ಸಂಘಟನೆಯವರು ಸಹ ಬಂದ್ಗೆ ಬೆಂಬಲ ನೀಡಿದ್ದು, ಎಂದಿನಂತೆ ಸಾರಿಗೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕೆಜಿಎಫ್‍ನಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ 150 ವರ್ಷಗಳ ಹಿಂದೆ ಆರಂಭಿಸಿರುವ ಪೊಲೀಸ್ ಅಧೀಕ್ಷಕರ ಹುದ್ದೆ ಹಾಗೂ ಕಚೇರಿಯನ್ನು ಯಾವುದೇ ಕಾರಣಕ್ಕೂ ರದ್ದು, ಅಥವಾ ಸ್ಥಳಾಂತರ ಮಾಡಬಾರದೆಂಬುದು ಸ್ಥಳೀಯರ ಒತ್ತಾಯವಾಗಿದೆ.
ಕೆಜಿಎಫ್‍ನಲ್ಲಿ ಹಿಂದೆ ಬ್ರಿಟಿಷರು ಚಿನ್ನದ ಗಣಿ ಕಾರ್ಯಾರಂಭ ಮಾಡಿದ ಸಮಯದಲ್ಲಿ ಪೊಲೀಸ್ ಅಧೀಕ್ಷಕರ ಹುದ್ದೆ ಮತ್ತು ಕಚೇರಿ ಪ್ರಾರಂಭಿಸಿದ್ದರು. ನಂತರ ಇಲ್ಲಿ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಕಾರ್ಮಿಕರು ಗಣಿ ಕೆಲಸ ನಿರ್ವಹಿಸಲು ಅಪಾರ ಸಂಖ್ಯೆಯಲ್ಲಿ ಬಂದು ನೆಲೆಸಿದ್ದರಿಂದ ಆಗ, ಪೊಲೀಸ್ ಅಧೀಕ್ಷಕರ ಹುದ್ದೆ ಸೃಷ್ಟಿಯಾಗಿತ್ತು. ನಂತರದ ದಿನಗಳಲ್ಲಿ ಗಣಿ ಮುಚ್ಚಿದರೂ ಕಾರ್ಮಿಕರು ಇಲ್ಲೇ ಗುಡಿಸಲು ನಿರ್ಮಿಸಿಕೊಂಡು ನೆಲೆಸಿದ್ದಾರೆ.