ಕೋಲಾರ: ಇಂದು ಬೆಳಗ್ಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಎಸ್ ಎಂ ಕೌಶಿಕ್ ಎಂಬ ವಿದ್ಯಾರ್ಥಿ 600ಕ್ಕೆ 596 ಅಂಕ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂದು ಬಿಡಗಡೆಯಾದ ಫಲಿತಾಂಶದಲ್ಲಿ ಶೇ.74.67ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಯಾದಗಿರಿಗೆ ಕೊನೆಯ ಸ್ಥಾನ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.12.79 ರಷ್ಟು ಹೆಚ್ಚು ಫಲಿತಾಂಶ ಬಂದಿದೆ.
ತಮ್ಮ ಈ ಸಾಧನೆ ಬಗ್ಗೆ ಖುಷಿ ಹಂಚಿಕೊಂಡ ಕೌಶಿಕ್, ಎರಡು ಅಂಕ ಹಿಂದಿಯಲ್ಲಿ ಕಡಿಮೆ ಬಂದಿದೆ, ಎರಡು ಅಂಕ ಇಂಗ್ಲೀಷ್ ಪತ್ರಿಕೆಯಲ್ಲಿ ಕಡಿಮೆ ಬಂದಿದೆ. ಪಿಸಿಎಂಬಿ ನಾಲ್ಕರಲ್ಲಿಯೂ ಔಟ್ ಆಫ್ ಔಟ್ ಬಂದಿದೆ. ನನಗೆ ಒಟ್ಟು 600ಕ್ಕೆ 596 ಅಂಕ ಬಂದಿವೆ. ನಾನು ಇಷ್ಟು ಅಂಕ ತೆಗೆದುಕೊಳ್ಳಲು ಮಖ್ಯ ಕಾರಣ ನನ್ನ ಶಿಕ್ಷಕರು, ಪೋಷಕರು ಹಾಗೂ ನನ್ನ ಸ್ನೇಹಿತರು. ಇವರೆಲ್ಲರ ಬೆಂಬಲ ಮತ್ತು ಪ್ರೋತ್ಸಾಹದಿಂದ ನಾನು ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು. ಬೆಂಗಳೂರಿನ ಆರ್ವಿ ಇಂಜಿನಿಯರ್ ಕಾಲೇಜಿನಲ್ಲಿ ಸಿಎಸ್ ಇಂಜಿನಿಯರ್ ಮಾಡಬೇಕೆಂಬುವುದು ನನ್ನ ಮುಂದಿನ ಗುರಿಯಾಗಿದೆ. ವಿದ್ಯಾರ್ಥಿಗಳಾದ ನಾವು ನಮಗೋಸ್ಕರ ಅಲ್ಲದಿದ್ದರೂ ತಂದೆ-ತಾಯಿ ಅಥವಾ ಪೋಷಕರಿಗಾಗಿಯಾದರೂ ಚೆನ್ನಾಗಿ ಓದಬೇಕು. ಒಟ್ಟಿನಲ್ಲಿ ಅವರು ಹೆಮ್ಮೆ ಪಡುವಂತಹ ಕೆಲಸ ಮಾಡಬೇಕು ಎಂದು ಸಂತಸ ಹಂಚಿಕೊಂಡರು.
ಎಸ್ ಎಂ ಕೌಶಿಕ್ ತಂದೆ ಮುರಳಿನಾಥ್ ಅವರು ಕಾಲೇಜಿನ ಪ್ರೆಸಿಡೆಂಟ್ ಆಗಿದ್ದರೆ ತಾಯಿ ಸುಜಾತಾ ಗೃಹಿಣಿಯಾಗಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೌಶಿಕ್ ಅವರಿಗೆ ಕಾಲೇಜಿನ ಸಿಬ್ಬಂದಿ, ಪೋಷಕರು ಹಾಗೂ ಸ್ನೇಹಿತರು ಸಿಹಿ ತಿನ್ನಿಸಿ ಶುಭಾಶಯಗಳನ್ನು ತಿಳಿಸಿದರು. ಕಾಲೇಜಿನ ಮುಂದೆ ಪಟಾಕಿ ಸಿಡಿಸಿ ಖುಷಿ ವ್ಯಕ್ತಪಡಿಸಿದರು.