ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೋಲಾರ:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ, ನಾನು ಹೇಳುತ್ತಿರುವುದು ಸುಳ್ಳು ಎಂದಾದರೆ ಕುರುಡುಮಲೆ ಗಣೇಶನ ಮುಂದೆ ನಿಂತು ಸಿದ್ದರಾಮಯ್ಯ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಈಶ್ವರಪ್ಪ ಸವಾಲು ಹಾಕಿದ್ದಾರೆ. ಮುಳಬಾಗಲು ತಾಲೂಕಿನ ಕುರುಡುಮಲೆ ಗಣೇಶನಿಗೆ ಇಂದು ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಹೇಳುತ್ತಿದ್ದಿರಿ. ನಾನು ಕುರುಡುಮಲೆ ಗಣೇಶನ ಮುಂದೆ ನಿಂತು ಸವಾಲು ಹಾಕುತ್ತಿದ್ದೇನೆ. ವರ್ಗಾವಣೆ ದಂಧೆ ತನಿಖೆಗೆ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ, ವರ್ಗಾವಣೆ ದಂಧೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅಕಸ್ಮಾತ್ ಹಣ ತೆಗೆದುಕೊಂಡಿದ್ದರೆ, ಅದರ ಎರಡು ಪಟ್ಟು ಅಧಿಕ ಹಣ ನೀವು ತೆಗೆದುಕೊಂಡಿಲ್ಲ ಎಂದು ತೀರ್ಮಾನ ಆದರೆ ಕುರುಡುಮಲೆ ಗಣಪತಿ ನನಗೆ ಏನು ಬೇಕಾದರೂ ಶಾಪ ಕೊಡಲಿ ಎಂದರು.
ಸಿದ್ದರಾಮಯ್ಯ ಕೇಂದ್ರೀಕೃತ ವರ್ಗಾವಣೆ ನೀತಿ ತಂದಿದ್ದಾರೆ, ಎಲ್ಲವೂ ನಿಮಗೆ ಸೇರಬೇಕು ಎಂಬುದು ಇದರ ಉದ್ದೇಶ. ಸಿಎಂ ಮತ್ತು ಅವರ ಮಗ ವರ್ಗಾವಣೆ ದಂಧೆಯಲ್ಲಿ ಲೂಟಿ ಮಾಡಿರುವುದನ್ನು ಇಲ್ಲ ಎಂದು ಸಾಬೀತು ಪಡಿಸಲು ಸಾಧ್ಯವೇ ಇಲ್ಲ. ನೀವು ಯಾರನ್ನು ನೇಮಕ ಮಾಡುತ್ತಿರೋ ಅವರ ಬಳಿ ನಾನೇ ಕನಿಷ್ಠ 25 ಐಎಎಸ್, ಐಪಿಎಸ್ ಸೇರಿದಂತೆ ಇತರೆ ಅಧಿಕಾರಿಗಳನ್ನು ಕರೆತರುತ್ತೇನೆ. ಎಷ್ಟು ದುಡ್ಡು ಕೊಟ್ಟಿದ್ದೇವೆ ಎಂದು ಅವರು ತನಿಖಾಧಿಕಾರಿಗಳ ಮುಂದೆ ಹೇಳುತ್ತಾರೆ. ಇದರ ಗೌಪ್ಯತೆ ಕಾಪಾಡಬೇಕು, ಇದನ್ನು ಸಾರ್ವಜಿಕರ ಮುಂದೆ ತಿಳಿಸುವ ಅವಶ್ಯಕತೆ ಇಲ್ಲ ಎಂದು ಈಶ್ವರಪ್ಪ ಹೇಳಿದರು.
ವರ್ಗಾವಣೆ ದಂಧೆಯ ಹಣವನ್ನು ಸ್ವತಃ ಸಿಎಂ ಹಾಗೂ ಅವರ ಮಗನಿಗೆ ಕೊಡಬೇಕು ಎಂದು ಆರೋಪಿಸಿದ ಅವರು, ಎಷ್ಟು ದುಡ್ಡು ಕೊಟ್ಟಿದ್ದೇವೆ ಎಂದು ನನ್ನ ಬಳಿ ಹೇಳಿರುವ ಅಧಿಕಾರಿಗಳನ್ನು ನೀವು ತನಿಖೆಗೆ ಯಾವ ನ್ಯಾಯಾಧೀಶರನ್ನು ನೇಮಕ ಮಾಡುತ್ತಿರೋ ಅವರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸುತ್ತೇನೆ. ನಾನು ಯಾವ ಖಾತ್ರಿ ಇಲ್ಲದೆ ಇದನ್ನು ಹೇಳುತ್ತಿಲ್ಲ. ಲೆಕ್ಕವೇ ಇಲ್ಲದಹಾಗೆ ಲೂಟಿಯಾಗುತ್ತಿದೆ. ಈಶ್ವರಪ್ಪ ಹೇಳುತ್ತಿರುವುದು ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಯಿಂದ ನಾನು, ನನ್ನ ಮಕ್ಕಳು ಹಿಂದಿನ ಸರ್ಕಾರಕ್ಕಿಂತ ಡಬಲ್ ಹಣ ತೆಗೆದುಕೊಂಡಿಲ್ಲ ಎಂದು ಕುರುಡುಮಲೆ ಗಣೇಶನ ಮುಂದೆ ಬಂದು ಪ್ರಮಾಣ ಮಾಡಲಿ ಎಂದರು.
ಇದನ್ನೂ ಓದಿ:ಜನವರಿಯಲ್ಲಿ ರಾಜ್ಯ ಸರ್ಕಾರ ಪತನ - ಯತ್ನಾಳ್ ಭವಿಷ್ಯ..