ಕೋಲಾರ :ದೇಶದ ಅತ್ಯಂತ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಲ್ಲೀಗ ಸೇಬು ಹಣ್ಣಿನ ಬೆಲೆಯಲ್ಲಿ ಟೊಮ್ಯಾಟೊ ಮಾರಾಟವಾಗುತ್ತಿದೆ.
ಕೊರೊನಾ ಹೊಡೆತಕ್ಕೆ ಮಂಕಾಗಿದ್ದ ಕೋಲಾರದ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ. 15 ಕೆಜಿ ತೂಕದ ಒಂದು ಟೊಮ್ಯಾಟೊ ಕ್ರೇಟ್‌ನ ಬೆಲೆ ಈಗ 800 ರೂ. ಗಡಿ ದಾಟಿದೆ. ಕಳೆದ ಒಂದು ವಾರದಿಂದ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೊ 800 ರೂ.ಗೆ ಮಾರಾಟವಾಗುತ್ತಿದೆ.
ಕೋಲಾರದ ಟೊಮ್ಯಾಟೊಗೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ ಸೇರಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಬೇಡಿಕೆ ಇದೆ. ಇದರಿಂದಾಗಿ ಈ ಸೀಸನ್‌ನಲ್ಲಿ ಸ್ಥಳೀಯ ಟೊಮ್ಯಾಟೊಗೆ ಉತ್ತಮ ಬೆಲೆ ಸಿಗುತ್ತಿದೆ. ಟನ್‌ಗಟ್ಟಲೆ ಟೊಮ್ಯಾಟೊ ರಫ್ತು ಮಾಡಲಾಗುತ್ತದೆ. ಅಲ್ಲದೆ ಹೊರ ರಾಜ್ಯಗಳಲ್ಲಿ ಮಳೆಯಿಂದ ಟೊಮ್ಯಾಟೊ ಬೆಳೆ ಇಲ್ಲ. ಹಾಗಾಗಿ, ಈ ಸೀಸನ್‌ನಲ್ಲಿ ಕೋಲಾರದ ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿದೆ.
ಕೋಲಾರ ಟೊಮ್ಯಾಟೊಗೆ ಫುಲ್ ಡಿಮ್ಯಾಂಡ್.. ಜಿಲ್ಲೆಯಲ್ಲಿ ಸೀಡ್ಸ್ ಮತ್ತು ನಾಟಿ ಟೊಮ್ಯಾಟೊವನ್ನು ಬೆಳೆಯಲಾಗುತ್ತದೆ. ಈ ಎರಡು ಉತ್ತಮ ತಳಿಗಳು, ಒಂದು ವಾರ ಕಾಲ ಕೆಡದಂತೆ ಇರುತ್ತದೆ. ಪ್ರತಿನಿತ್ಯ 14 ರಿಂದ 15 ಸಾವಿರ ಕ್ವಿಂಟಾಲ್‌ನಷ್ಟು ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದೆ. ನಿತ್ಯ ಸರಾಸರಿ 3 ಕೋಟಿಯಷ್ಟು ವಹಿವಾಟು ನಡೆಯುತ್ತದೆ.
ಮಾರ್ಚ್‌ನಿಂದ ಸೆಪ್ಟಂಬರ್ ತಿಂಗಳವರೆಗೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚು ಬಿಸಿಲಿರುತ್ತದೆ. ಅಲ್ಲಿ ಟೊಮ್ಯಾಟೊ ಬೆಳೆಯಲು ಪೂರಕ ವಾತಾವರಣ ಇರಲ್ಲ. ಜಿಲ್ಲೆಯಲ್ಲಿ ಇದೇ ತಿಂಗಳು ಹೆಚ್ಚಾಗಿ ಟೊಮ್ಯಾಟೊ ಬೆಳೆಯುವುದರಿಂದ ಬೇಡಿಕೆ ಹೆಚ್ಚು. ಅಲ್ಲದೆ ರಾಜ್ಯಗಳಲ್ಲಿ ಕೊರೊನಾ ಭೀತಿ ಇರುವುದರಿಂದ ನಿಧಾನಗತಿಯಲ್ಲಿ ಬೆಲೆ ಏರುತ್ತಿದೆ. 15 ದಿನಗಳ ನಂತರ ಟೊಮ್ಯಾಟೊ ಬೆಲೆ ಒಂದು ಬಾಕ್ಸ್‌ಗೆ 1000 ರೂ. ಗೆ ಏರಿಕೆ ಆಗಲಿದೆ ಅಂತಾರೆ ವ್ಯಾಪಾರಸ್ಥರು.
ರೈತರಿಗೆ ಟೊಮ್ಯಾಟೊ ಬೆಲೆ ಅಂದ್ರೆ ಕಣ್ಣಾಮುಚ್ಚಾಲೆ ಆಟ. ಒಮ್ಮೆ ರೇಟ್ ಗಗನಕ್ಕೇರಿದ್ರೆ, ಮತ್ತೊಮ್ಮೆ ಪಾತಾಳಕ್ಕಿಳಿಯುತ್ತೆ. ಅದಕ್ಕೆ ಇಲ್ಲಿ ಟೊಮ್ಯಾಟೊ ರಸ್ತೆಗೆ ಸುರಿಯೋದು ಸರ್ವೇ ಸಾಮಾನ್ಯ.