ಕೋಲಾರ: ಎಟಿಎಂಗಳಲ್ಲಿ ಹಣ ಪಡೆದುಕೊಳ್ಳುವ ಗ್ರಾಹಕರು ಇನ್ಮುಂದೆ ಎಟಿಎಂ ಯಂತ್ರದಲ್ಲಿ ಹಣ ಪಡೆದುಕೊಳ್ಳುವ ಮುನ್ನ ಎಚ್ಚರ ವಹಿಸಬೇಕಾಗಿದೆ. ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಅಕೌಂಟ್‌ನಲ್ಲಿರುವ ಹಣವನ್ನು ಕಳ್ಳರು ಎಗರಿಸುತ್ತಾರೆ.
ಬಂಗಾರಪೇಟೆ ಪಟ್ಟಣದ ಮಾದಪ್ಪ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ (ಕೆಜಿಬಿ) ಬ್ಯಾಂಕ್‌ನ ಎಟಿಎಂ ಇದಕ್ಕೆ ಸಾಕ್ಷಿ ಎಂಬಂತೆ ಈ ಹೈಟೆಕ್ ಕಳ್ಳರ ಕೃತ್ಯಗಳು ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಮಾದಪ್ಪ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ (ಕೆಜಿಬಿ) ಬ್ಯಾಂಕ್‌ನ ಎಟಿಎಂನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಂತಹ ಫ್ರಾಡ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಎಟಿಎಂ ಕೇಂದ್ರಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಹೈಟೆಕ್ ಕಳ್ಳರು ನಿಮ್ಮ ಎಟಿಎಂನ ಮಾಹಿತಿಯನ್ನೆಲ್ಲಾ ಕದಿಯುವ, ಸ್ವೈಪ್ ಮಾಡುವ ಡಿವೈಸ್ ಮೇಲೆ ಅವರದ್ದೇ ಆದ ಕಳ್ಳ ಡಿವೈಸ್ ಇಡಲಾಗುತ್ತೆ. ಪಿನ್ ನಂಬರ್ ಒತ್ತುವ ಸ್ಥಳದಲ್ಲಿ ಮತ್ತೊಂದು ಕ್ಯಾಮರಾವನ್ನು ಅಳವಡಿಸುವ ಕಳ್ಳರು, ಬ್ಯಾಂಕ್ ಮಾಹಿತಿ ಕದಿಯುವ ಹೈಟೆಕ್ ಕಳ್ಳತನ ಆರಂಭಿಸಿದ್ದಾರೆ.
ತಂತ್ರಜ್ಞಾನ ಬೆಳೆದಂತೆ ಕಳ್ಳರು ಸಹ ಹೈಟೆಕ್ ಕಳ್ಳತನಗಳಿಗೆ ಮುಂದಾಗಿದ್ದಾರೆ. ಅದರಂತೆ ಬಂಗಾರಪೇಟೆ ಪಟ್ಟಣದಲ್ಲಿರುವ ಎಟಿಎಂಗೆ ಬರುವ ಇಬ್ಬರು ಆಗಂತುಕರು ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಧರಿಸಿ ಎಟಿಎಂನಲ್ಲಿ ಕಳ್ಳ ಡಿವೈಸ್ ಅಳವಡಿಸುತ್ತಾರೆ. ಈ ಸಂಪೂರ್ಣ ದೃಶ್ಯಾವಳಿಗಳು ಎಟಿಎಂನಲ್ಲಿಯೇ ಆಳವಿಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಎಟಿಎಂಗೆ ಹೋಗಿದ್ದ ಬಂಗಾರಪೇಟೆ ಪಟ್ಟಣದ ಕರುಣಾಗರನ್ ಎಂಬುವವರಿಗೆ ಡಿವೈಸ್ ಅಳವಡಿಕೆ ವಿಚಾರ ಗೊತ್ತಾಗಿದ್ದು, ಅದನ್ನು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ಎಟಿಎಂನ ಬಾಗಿಲು ಮುಚ್ಚಲಾಗಿದ್ದು, ಸ್ವೈಪ್ ಮಷಿನ್ನಲ್ಲಿ ಕಾರ್ಡ್ ಸ್ವೈಪ್ ಮಾಡಿದ ಕೂಡಲೇ ಅದರ ಮಾಹಿತಿ ಕಳ್ಳ ಡಿವೈಸ್ ಮೂಲಕ ಕಳ್ಳರಿಗೆ ರವಾನೆ ಆಗುತ್ತದೆ. ಪಿನ್ ನಂಬರ್ ಒತ್ತುವ ಜಾಗದಲ್ಲಿ ಮಿನಿ ಕ್ಯಾಮರಾವೊಂದನ್ನು ಇಡಲಾಗಿದ್ದು, ಅದರ ಹಿಂದೆ ಡಿವೈಸ್‌ನಿಂದ ಎಲ್ಲಾ ಮಾಹಿತಿ ಕದಿಯುವ ಕಳ್ಳರು ದೂರದಲ್ಲೆಲ್ಲೋ ಕುಳಿತು ಹಣ ಲಪಟಾಯಿಸುತ್ತಾರೆ.
ಸದ್ಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕೆಜಿಎಫ್ ಪೊಲೀಸರು ತನಿಖೆಗೆ ಮುಂದಾಗಿದ್ದು, ಶೀಘ್ರದಲ್ಲೆ ಹೈಟೆಕ್ ಕಳ್ಳರನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.