ಕೋಲಾರ :ಸೀಪುರ ಗ್ರಾಮದಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಒಂದು ಸರ್ಕಾರಿ ಶಾಲೆ ಇದೆ. ಈ ಶಾಲೆಯಲ್ಲಿ ಆರು ಜನ ಶಿಕ್ಷಕರು ನೂರು ಜನ ಮಕ್ಕಳಿದ್ದಾರೆ. ಆದರೆ, ಈ ಎಲ್ಲಾ ಮಕ್ಕಳಿಗೆ ಸೇರಿ ಇರುವುದು ಎರಡು ಕೊಠಡಿ ಮಾತ್ರ. ಈ ದುಸ್ಥಿತಿಯಲ್ಲಿ ಮಕ್ಕಳು ಪಾಠ ಕಲಿಯುವುದಾದರೂ ಹೇಗೆ ಅನ್ನೋದೆ ದೊಡ್ಡ ಪ್ರಶ್ನೆ. ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿದ್ದರೂ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ.
ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಶಾಲಾ ಕಟ್ಟಡ ಮಳೆಗೆ ಕುಸಿದು ಬಿದ್ದಿತ್ತು. ಕಟ್ಟಡ ಬಿದ್ದ ಕಾರಣಕ್ಕೆ ಕ್ರಿಪ್ಕೋ ಸಮುದಾಯ ಭವನದಲ್ಲಿದ್ದ ಹಾಲಿನ ಡೈರಿಯ ಎರಡು ಕೊಠಡಿಗಳನ್ನು ಶಾಲೆಗಾಗಿ ನೀಡಲಾಗಿತ್ತು. ಹಾಲಿನ ಡೈರಿಯನ್ನು ಶಾಲೆಯಲ್ಲಿದ್ದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಸದ್ಯ ಸೀಪುರ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಇದ್ದು, ಒಂದು ಕೊಠಡಿಯಲ್ಲಿ ನಾಲ್ಕು ತರಗತಿ, ಇನ್ನೊಂದು ಕೊಠಡಿಯಲ್ಲಿ ಐದು ತರಗತಿಗಳು ನಡೆಯುತ್ತಿವೆ. ಇನ್ನು ಅಲ್ಲೇ ಊಟ ಅಲ್ಲೇ ತಿಂಡಿ, ಅಲ್ಲೇ ಆಟ ಅಲ್ಲೇ ಪಾಠ ಎನ್ನುವ ಸ್ಥಿತಿ ಇದೆ.
ನೂರು ಮಕ್ಕಳಿರು ಶಾಲೆಗೆ ಸ್ವಂತ ಕಟ್ಟಡ ಇಲ್ಲ.. ಸೀಪುರ ಗ್ರಾಮದಲ್ಲಿ ಒಟ್ಟು 3,000 ಜನಸಂಖ್ಯೆ ಇದೆ. ಬಹುತೇಕ ಎಲ್ಲರೂ ಕೂಲಿ ಮಾಡಿ ಬದುಕುತ್ತಿರುವ ಬಡಜನರೇ ಹೆಚ್ಚು. ಹೀಗಿರುವಾಗ, ಎಷ್ಟೋ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಇಲ್ಲ ಎಂದು ಶಾಲೆಗೆ ಬೀಗ ಹಾಕಿರುವಾಗ ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಇದೆ. ಆದರೆ, ಸರ್ಕಾರ ಮಾತ್ರ ಶಾಲೆಗೆ ಬೇಕಾದ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ಈ ಶಾಲೆಗೆ ಕಟ್ಟಡವಿಲ್ಲ, ತರಗತಿ ಮಾಡಲು ಕೊಠಡಿ ಇಲ್ಲ, ಊಟದ ಕೋಣೆ ಇಲ್ಲ, ಆಟದ ಮೈದಾನವೂ ಇಲ್ಲ, ಆಟ ಹೇಳಿಕೊಡಲು ಶಿಕ್ಷಕರೂ ಇಲ್ಲ.
ಗ್ರಾಮಸ್ಥರು ಶಾಸಕ ಶ್ರೀನಿವಾಸಗೌಡರ ಮನೆಯ ಬಳಿ ಹೋಗಿ ಒಂದು ಶಾಲೆ ನಿರ್ಮಾಣ ಮಾಡಿಕೊಡುವಂತೆ ಅಂಗಲಾಚಿದ್ದಾರೆ. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆಯ ಬಳಿ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸ್ಥಿತಿ ಇಂದ ಕೆಲವು ಮಕ್ಕಳ ಶಾಲೆ ಬಿಟ್ಟಿದ್ದಾರೆ. ಕೆಲವರು ಪಕ್ಕದ ಶಾಲೆಗೆಳಿಗೆ ಹೋಗಿದ್ದಾರೆ.
ಇದನ್ನೂ ಓದಿ:ಸ್ಮೋಕ್ ಗ್ರೆನೇಡ್ ಎಸೆದು ಕಾನ್ ಚಿತ್ರೋತ್ಸವದಲ್ಲಿ ಮಹಿಳೆಯರ ಪ್ರತಿಭಟನೆ