ಕರ್ನಾಟಕ

karnataka

ETV Bharat / state

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ: ರಸ್ತೆ ಗುಂಡಿಗಳನ್ನು ಮುಚ್ಚಿ ಮಾದರಿಯಾದ ಆಟೋ ಚಾಲಕ

ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಸುತ್ತಮುತ್ತ ರಸ್ತೆಗಳ ಹಾಳಾಗಿ ಹೋಗಿದ್ದು, ಟೆಂಪೋ ಚಾಲಕ ಶ್ರೀನಿವಾಸರೆಡ್ಡಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ಆರಂಭಿಸಿದ್ದಾರೆ.

Srinivasa Reddy
ಶ್ರೀನಿವಾಸರೆಡ್ಡಿ

By

Published : Oct 27, 2020, 7:01 PM IST

ಕೋಲಾರ: ರಸ್ತೆ ಹಾಳಾಗಿದ್ರೆ ಹಾಳಾದ ರಸ್ತೆಯಲ್ಲಿ ಓಡಾಡುವ ಜನರು ಅಧಿಕಾರಿಗಳನ್ನ ಇಲ್ಲಾ ಜನಪ್ರತಿನಿಧಿಗಳನ್ನು ನಿಂದಿಸುತ್ತಾ ಸುಮ್ಮನೆ ಕೂರುತ್ತಾರೆ. ಆದ್ರೆ ಇಲ್ಲೊಬ್ಬ ಟೆಂಪೋ ಚಾಲಕ ನಿಮ್ಮಿಂದ ನಾವಲ್ಲ, ನಮ್ಮಿಂದ ನೀವು ಎನ್ನುವ ಸಂದೇಶ ಸಾರುವ ಮೂಲಕ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಮ್ಮ ಕೆಲಸದ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.

ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಸುತ್ತಮುತ್ತ ರಸ್ತೆಗಳು ಹದಗೆಟ್ಟಿವೆ. ಕ್ಯಾಸಂಬಳ್ಳಿ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರನ್ನು ಕೊಟ್ಟ ಗ್ರಾಮ. ಆದ್ರೆ ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳು ಇಡೀ ರಾಜ್ಯವನ್ನೇ ನಾಚಿಸುವಂತಿವೆ. ಆದ್ರೆ ಗ್ರಾಮದಿಂದ ರಾಜ್ಯ ಹೆದ್ದಾರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿವೆ.

ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಟೆಂಪೋ ಚಾಲಕ ಶ್ರೀನಿವಾಸರೆಡ್ಡಿ

ಆಂಧ್ರಪ್ರದೇಶದ ವಿ.ಕೋಟೆಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಹಳ್ಳ ಕೊಳ್ಳಗಳಿಂದ ಕೂಡಿರುವುದರಿಂದ ಪ್ರತಿದಿನ ಅಪಘಾತಗಳು ಸಂಭವಿಸಿ ಅನೇಕ ಜನ ತೊಂದರೆಗೆ ಸಿಲುಕುತ್ತಿದ್ದಾರೆ. ಅಷ್ಟೇ ಅಲ್ಲದೆ ಆಟೋ, ಬೈಕ್​ಗಳು ಓಡಾಡೋದೆ ಕಷ್ಟ ಎನ್ನುವ ಸ್ಥಿತಿ ಇದೆ. ಹಾಗಾಗಿ ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಏನು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆ ಗ್ರಾಮದ ಟೆಂಪೋ ಚಾಲಕ ಶ್ರೀನಿವಾಸರೆಡ್ಡಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಮೌನ ಪ್ರತಿಭಟನೆ ಆರಂಭಿಸಿದ್ದಾರೆ.

ಟೆಂಪೋ ಚಾಲಕ ಶ್ರೀನಿವಾಸರೆಡ್ಡಿ ಕಳೆದ 5 ವರ್ಷಗಳಿಂದ ಚಾಲಕನ ವೃತ್ತಿಯಲ್ಲಿದ್ದು, ತನ್ನ ಕೆಲಸದ ಜೊತೆ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿದಿನ ತಮ್ಮ ನಿತ್ಯ ಕಾಯಕದ ಜೊತೆಗೆ 2 ಗಂಟೆಗಳ ಕಾಲ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೆ ಕಲ್ಲು ಮಣ್ಣು ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದ ಹೊರಗಡೆ ಮನೆಗಳ ಕಚ್ಚಾ ವಸ್ತುಗಳನ್ನು ತನ್ನ ಟೆಂಪೋದಲ್ಲಿ ಹಾಕಿಕೊಂಡು ಬಂದು ಹಳ್ಳಕೊಳ್ಳಗಳಿಗೆ ತುಂಬಿಸುತ್ತಾರೆ. ಇದರಿಂದ ರಸ್ತೆ ಸಂಪೂರ್ಣವಾಗಿ ಸರಿಯಾಗದೆ ಇದ್ರು ಅವುಗಳಲ್ಲಿರುವ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿದ್ರೆ ಸ್ವಲ್ಪವಾದ್ರು ಅಪಘಾತಗಳನ್ನ ತಪ್ಪಿಸಬಹುದು ಅನ್ನೋ ಆಲೋಚನೆ ಶ್ರೀನಿವಾಸರೆಡ್ಡಿಯವರದ್ದು.

ರಸ್ತೆ ದುರಸ್ತಿ ಬಗ್ಗೆ ಹಲವಾರು ಹೋರಾಟಗಳು, ಮನವಿ ಪತ್ರಗಳನ್ನು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಶ್ರೀನಿವಾಸರೆಡ್ಡಿ ಪ್ರತಿನಿತ್ಯ ಆಗುವ ಅನಾಹುತವನ್ನು ತಪ್ಪಿಸಲು ಕಳೆದ ಮೂರು ದಿನದಿಂದ 2 ಗಂಟೆ ಶ್ರಮದಾನ ಮಾಡುತ್ತಿದ್ದಾರೆ. ಇವರ ಈ ಕೆಲಸ ನೋಡಿ ಕೆಲವರು ಆಡಿಕೊಂಡು ನಕ್ಕರೆ, ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರು ಏನೇ ಅಂದುಕೊಂಡ್ರು ಶ್ರೀನಿವಾರೆಡ್ಡಿ ತನ್ನ ಪಾಡಿಗೆ ತಾನು ಇದೊಂದು ವಿಭಿನ್ನ ಹೋರಾಟ ಎಂದು ಈ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆ ರಸ್ತೆಗಳು ಹಾಳಾಗಿ ಹೋಗಿದ್ರೆ ಅದರಲ್ಲಿ ಓಡಾಡುವ ಜನರು ಅದನ್ನು ಸಹಿಸಿಕೊಂಡು ಅಧಿಕಾರಿಗಳಿಗೆ ಬೈದುಕೊಂಡು ಜನಪ್ರತಿನಿಧಿಗಳನ್ನು ಹೀಯಾಳಿಸಿಕೊಂಡು ಸುಮ್ಮನೇ ಹೋಗುತ್ತಾರೆ. ಆದ್ರೆ ಶ್ರೀನಿವಾಸರೆಡ್ಡಿ ವಿಭಿನ್ನ ಹೋರಾಟ ಮಾಡುವ ಮೂಲಕ ನೀವಿಲ್ಲ ಅಂದ್ರು ನಾವು ಬದುಕಬಲ್ಲೆವು ಎನ್ನುವ ಸಂದೇಶ ರವಾನಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ.

ABOUT THE AUTHOR

...view details