ಕೋಲಾರ:ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿಂದು ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್. ನಾರಾಯಣಸ್ವಾಮಿ ನಡುವೆ ವಾಗ್ವಾದ ನಡೆಯಿತು. ಕಾರ್ಯಕ್ರಮದ ವೇದಿಕೆ ಮೇಲೆಯೇ ಜನಪ್ರತಿನಿಧಿಗಳು ಏಕವಚನದಲ್ಲೇ ಪರಸ್ಪರ ನಿಂದಿಸಿಕೊಂಡರು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಟಾಪಟಿ ಕೆಲಕಾಲ ಅಲ್ಲೋಕ ಕಲ್ಲೋಲ ಸೃಷ್ಟಿ ಮಾಡಿತ್ತು.
ಜಿಲ್ಲಾಡಳಿತದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದ್ದು, ಅವರದೇ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ನಡುವೆ ಕಾರ್ಯಕ್ರಮ ಆರಂಭವಾದ ನಂತರ ಸಂಸದ ಮುನಿಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೆಲಕಾಲ ಇದ್ದು ವಾಪಸ್ ಹೋಗುವ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಅವರು, ಸಚಿವ ಭೈರತಿ ಸುರೇಶ್ ಪಕ್ಕದಲ್ಲಿ ಕುಳಿತಿದ್ದ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರನ್ನು ನೋಡಿ, ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ ಎಂದು ಎಸ್ ಮುನಿಸ್ವಾಮಿ ಏರುಧ್ವನಿಯಲ್ಲಿ ಮಾತನಾಡಿದರು.
ಇದಕ್ಕೆ ನಾರಾಯಣಸ್ವಾಮಿ ಕೆರಳಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಇನ್ನೇನು ಕೈ ಕೈ ಮಿಲಾಯಿಸುವ ಹಂತಕ್ಕೆ ಜನಪ್ರತಿನಿಧಿಗಳ ಜಗಳ ತಲುಪಿತು. ಆಕ್ರೋಶಗೊಂಡ ಎಸ್ ಎನ್ ನಾರಾಯಣಸ್ವಾಮಿ ಅವರು ಸಂಸದರಿಗೆ ಏಕವಚನದಲ್ಲಿ ಬೈಯಲು ಶುರು ಮಾಡಿಕೊಂಡರು. ಆಗ ವೇದಿಕೆ ಮೇಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರು ಕೂಡಾ ಸಂಸದ ಹಾಗೂ ಶಾಸಕ ಇಬ್ಬರನ್ನೂ ಸಮಾಧಾನಪಡಿಸಿಲು ಮುಂದಾದರು.
ಈ ವೇಳೆ ವಾಪಸ್ ಹೋಗುತ್ತಿದ್ದ ಸಂಸದ ಮುನಿಸ್ವಾಮಿ ವಾಪಸ್ ಶಾಸಕ ನಾರಾಯಣಸ್ವಾಮಿ ಕಡೆ ಬರಲು ಯತ್ನಿಸಿದರು. ಆಗ ಕೋಲಾರ ಎಸ್ಪಿ ನಾರಾಯಣ್, ಸಂಸದ ಎಸ್ ಮುನಿಸ್ವಾಮಿ ಅವರನ್ನು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು. ಸಾಕಷ್ಟು ತಳ್ಳಾಟ ನೂಕಾಟ ಜೊತೆಗೆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.