ಮಡಿಕೇರಿ(ಕೊಡಗು): ಕೋವಿಡ್ ರೋಗವು ಬಡವರು-ಶ್ರೀಮಂತರು ಅಂಥ ನೋಡಲ್ಲ. ಎಲ್ಲರಿಗೂ ಬರುತ್ತದೆ. ಆದ್ರೆ ಕೊಡಗು ಜಿಲ್ಲೆಯ ಪಾಲಿಬೆಟ್ಟದಲ್ಲಿ ಮಾತ್ರ ಕೋವಿಡ್ ಎರಡನೇ ಲಸಿಕೆ ನೀಡುವಲ್ಲಿ ಬಡವರು ಶ್ರೀಮಂತರು ಎಂದು ಭೇದಭಾವ ಮಾಡಿ ಬಡವರಿಗೆ ಮಾತ್ರ ಲಸಿಕೆ ಹಾಕಿಲ್ಲ ಎಂದು ಜನರು ನಿನ್ನೆ ಆರೋಪಿಸಿದ್ದಾರೆ. ಇದು ಗಲಾಟೆಗೆ ಕಾರಣವಾಗಿದೆ.
ಕೋವಿಡ್ ಲಸಿಕೆ ನೀಡುವಲ್ಲಿ ತಾರತಮ್ಯ ಆರೋಪ - ಗಲಾಟೆ ಈ ಘಟನೆ ನಡೆದಿರೋದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ. ಬಾಂಬೆ ಕ್ಲಬ್ ಎನ್ನುವ ಒಂದು ಸಂಸ್ಥೆ ಪಾಲಿ ಬೆಟ್ಟ ಭಾಗದಲ್ಲಿ ಜನರಿಗೆ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ. ಸುತ್ತ ಮುತ್ತಲಿನ ಕಾಫಿತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮುಂಜಾನೆ ಬಂದು ಸಾಲಿನಲ್ಲಿ ನಿಂತಿದ್ದಾರೆ. ವಿರಾಜಪೇಟೆ ಶಾಸಕ ಕೆ.ಜಿ ಬೋಪ್ಪಯ್ಯ ಕಾರ್ಯಕ್ರಮ ಉದ್ಘಾಟನಾ ಮಾಡಿ ಹೋಗಿದ್ದಾರೆ. ನಂತ್ರ ಸಾಲಿನಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಬಂದು ನಿಂತಿದ್ದಾರೆ.
ಆದ್ರೆ ಸಾಲಿನಲ್ಲಿ ನಿಂತವರನ್ನು ಬಿಟ್ಟು ಇನ್ನೊಂದು ಸಾಲನ್ನು ಮಾಡಿ ಆ ಸಾಲಿನಲ್ಲಿ ಹಣವಂತರು, ಮಾಲೀಕರು ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ. ನಮ್ಮನ್ನು ನಿಂತಲ್ಲೇ ನಿಲ್ಲಿಸಿದ್ದಾರೆ. ಕೊನೆಗೆ ಲಸಿಕೆ ಖಾಲಿಯಾಗಿದೆ ಎಂದಿದ್ದಾರೆಂದು ಆರೋಪಿಸುರುವ ಜನರು ರೊಚ್ಚಿಗೆದ್ದು ಆಯೋಜಕರೊಂದಿಗೆ ಗಲಾಟೆ ಮಾಡುತ್ತ ಲಸಿಕೆ ಕೊಡುವಂತೆ ಒತ್ತಾಯಿಸಿದ್ದಾರೆ.
ಬಡವರಿಗೆ ಮಾತ್ರ ರೋಗ ಬಂದು ಸಾಯಲಿ, ಅವರಿಗೆ ಲಸಿಕೆ ಬೇಡ. ಶ್ರೀಮಂತರು ಬದುಕಲಿ. ಹಾಗಿದ್ರೆ ಲಸಿಕೆ ಕೊಡುತ್ತೇವೆಂದು ನಮ್ಮನ್ನೇಕೆ ಕರಿಸಬೇಕಿತ್ತು. ಶ್ರೀಮಂತರಿಗೆ ಬೇರೆ ಸಾಲು ಮತ್ತು ಬಡವರಿಗೆ ಬೇರೆ ಸಾಲು ಏಕೆ? ಎಲ್ಲರೂ ಮನುಷ್ಯರೇ, ಎಲ್ಲರಿಗೂ ರೋಗ ಬರುತ್ತದೆ. ತಾರತಮ್ಯ ಮಾಡದೆ ಎಲ್ಲರಿಗೂ ಲಸಿಕೆ ಕೊಡಿ. ಬೆಳಗ್ಗೆ 6ಗಂಟೆಯಿಂದ ನಿಂತಿದ್ದವರನ್ನು ಬಿಟ್ಟು ಬೇರೆ ಸಾಲಿನಲ್ಲಿ ಬಂದು ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ. ನಮಗೆ ಏಕೆ ಲಸಿಕೆ ಕೊಟ್ಟಿಲ್ಲ. ನಮಗೂ ಲಸಿಕೆ ಕೊಡಿ ಎಂದು ಜನರು ಒತ್ತಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.