ಕೊಡಗು:2018ರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ-ಮಠ ಕಳೆದುಕೊಂಡಿದ್ದವರಿಗೆ ಸರ್ಕಾರ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಎರಡು ವರ್ಷಗಳ ಬಳಿಕ ಸಂತ್ರಸ್ತರು ಮನೆ ದೊರೆತ ಸಂತಸದಲ್ಲಿದ್ದಾರೆ.
ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ನ ಮೈತ್ರಿ ಸರ್ಕಾರ ಸಂತ್ರಸ್ತರಿಗೆ 6 ತಿಂಗಳಲ್ಲೇ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿತ್ತು. ಎರಡು ವರ್ಷಗಳು ಕಳೆಯುತ್ತಾ ಬಂದರೂ ಸಂತ್ರಸ್ತರಿಗೆ ಸ್ವಂತ ಸೂರು ಸೇರುವ ಭಾಗ್ಯ ಸಿಗಲಿಲ್ಲ. ಮಹಾಮಳೆ ಸಂಭವಿಸಿ ಎರಡು ವರ್ಷಗಳ ಬಳಿಕ ಇಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕಂದಾಯ ಸಚಿವ ಆರ್ ಅಶೋಕ್ ಅವರು 483 ಸಂತ್ರಸ್ತರಿಗೆ ಮನೆ ಹಸ್ತಾಂತರಿಸಿದರು.
ಕೊಡಗು ಮಳೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಸೋಮವಾರಪೇಟೆ ತಾಲೂಕಿನ ಜಂಬೂರಿನಲ್ಲಿನ 383 ಮತ್ತು ಮಡಿಕೇರಿ ತಾಲೂಕಿನ ಮದೆ ಗ್ರಾಮದಲ್ಲಿ ನಿರ್ಮಿಸಿರುವ 80 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಸಚಿವ ಆರ್. ಅಶೋಕ್ ಅವರು ಜಂಬೂರಿನ ಕಾರ್ಯಪ್ಪ ಬಡಾವಣೆಯಲ್ಲಿ ಟೇಪ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಸ್ತುವಾರಿ ಸಚಿವ ವಿ ಸೋಮಣ್ಣ ಉದ್ಘಾಟಿಸಿದರು. ಮನೆಯೊಂದರ ಟೇಪ್ ಕತ್ತರಿಸಿ ಫಲಾನುಭವಿ ಸಂತ್ರಸ್ತರಿಗೆ ಮನೆಯ ಕೀ ವಿತರಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆಯೇ ಮಡಿಕೇರಿ ಸಮೀಪದ ಕರ್ಣಂಗೇರಿಯಲ್ಲಿ 35 ಮನೆಗಳನ್ನು ಹಸ್ತಾಂತರ ಮಾಡಿದ್ದ ಸರ್ಕಾರ ಇದೀಗ ಜಂಬೂರು ಮತ್ತು ಮದೆನಾಡಿನಲ್ಲಿ 483 ಮನೆಗಳನ್ನು ಹಸ್ತಾಂತರಿಸಿದೆ. ಗಾಳಿಬೀಡು, ಬಿಳಿಗೇರಿ ಸೇರಿದಂತೆ ಹಲವೆಡೆ ಇನ್ನೂ 200ಕ್ಕೂ ಹೆಚ್ಚು ಮನೆ ನಿರ್ಮಾಣ ಆಗಬೇಕಾಗಿದೆ.