ಕೊಡಗು: ಪ್ರಜಾಪ್ರಭುತ್ವದ ಮೌಲ್ಯ, ಮತದಾನದ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಸಲುವಾಗಿ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 'ಶಿಕ್ಷಣ ಇಲಾಖೆ ಶಾಲಾ ಸಂಸತ್ತು' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳು ಮತದಾನ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಖತ್ ಖುಷಿ ಪಟ್ಟರು.
ಹೌದು, ಮೊರಾರ್ಜಿ ಶಾಲೆಯಲ್ಲಿ 2022- 23ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ಲೋಕಸಭಾ ಮತ್ತು ವಿಧಾನಸಭಾ ಚುನಾವಣಾ ಮಾದರಿಯಲ್ಲಿ ನಡೆಸಲಾಯಿತು. ಮಕ್ಕಳಿಗೆ ಶಾಲೆಯ ವತಿಯಿಂದ ಚುನಾವಣಾ ಆಯೋಗ ನೀಡುವ ರೀತಿಯಲ್ಲೇ ಗುರುತಿನ ಚೀಟಿ ನೀಡಲಾಗಿತ್ತು. ಮೊಬೈಲ್ ಇವಿಎಂ ಮೂಲಕವೇ ಮತದಾನದ ಪ್ರಕ್ರಿಯೆ ಮಾಡಲಾಯಿತು.
ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರೆ, ಮಕ್ಕಳು ತಮ್ಮ ಹಕ್ಕು ಚಲಾಯಿಸಿದರು. ಇದಕ್ಕೂ ಮುನ್ನ ಚುನಾವಣೆಯಲ್ಲಿ ಸ್ಪರ್ಧಿಸಲು ಮಕ್ಕಳು ಮುಖ್ಯ ಚುನಾವಣಾ ಅಧಿಕಾರಿ ಮಮತಾ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಸಲ್ಲಿಕೆಯಾದ 47 ನಾಮಪತ್ರಿಕೆಯಲ್ಲಿ 11 ನಾಮಪತ್ರಗಳನ್ನ ತಿರಸ್ಕಾರ ಮಾಡಲಾಯಿತು.