ಮಡಿಕೇರಿ :ಕೊಡಗಿನ ಆರಾಧ್ಯ ದೈವ, ಕೊಡಗಿನ ಕುಲ ದೇವತೆ ಮಾತೆ ಕಾವೇರಿ ತೀರ್ಥೋದ್ಭವ ತಲಕಾವೇರಿಯಲ್ಲಿ ನಿನ್ನೆ ನಡೆದ ಹಿನ್ನೆಲೆ ಪುರಾಣ ಪ್ರಸಿದ್ಧ ಬಲಮುರಿ ಗ್ರಾಮದ ಅಗಸ್ತ್ಯ ಹಾಗೂ ಕಾವೇರಿ ಮಾತೆಗೆ ಪೂಜೆ ಧಾರ್ಮಿಕ ವಿಧಿವಿಧಾನಗಳನ್ನ ನೆರವೇರಿಸಲಾಗುತ್ತಿದೆ.
ಅಗಸ್ತ್ಯೇಶ್ವರ, ಕಣ್ವಮುನೀಶ್ವರ ದೇಗುಲದಲ್ಲಿ ವಿಶೇಷ ಪೂಜೆ.. ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಜರುಗಿದ ಕಾವೇರಿ ತೀರ್ಥೋದ್ಭವದ ಮರು ದಿನ ಸಂಪ್ರದಾಯದಂತೆ ಕಾವೇರಿ ನದಿ ತೀರದ ಬಲಮುರಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವ ಮುನೀಶ್ವರ ದೇವಾಲಯಗಳಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ.
ಮಡಿಕೇರಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಇರುವ ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ಅವರ ನೇತೃತ್ವದಲ್ಲಿ ಬೆಳಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯ ಆರಂಭಗೊಂಡಿದ್ದವು. ದೇವರಿಗೆ ಕರ್ಪೂರದ ಆರತಿ, ಕುಂಕುಮಾರ್ಚನೆ, ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.
ಕಾವೇರಿ ನದಿ ಎಡಭಾಗದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದವು. ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆ ಹಣ್ಣುಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲು ಗ್ರಾಮಗಳಿಂದ ತಲಕಾವೇರಿಗೆ ಹೋಗದೆ ಇರುವ ಭಕ್ತರು ಬಂದು ಪೂಜೆ ಹಾಗೂ ಪಿಂಡ ಪ್ರದಾನ ಮಾಡಿ ಹೋಗುವುದು ಇಲ್ಲಿನ ವಾಡಿಕೆಯಾಗಿದೆ.