ಕೊಡಗು: ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಅದರೆ, ಈವರೆಗೆ ಮಾಡಿರುವ ಎಲ್ಲಾ ಐಡಿಯಾಗಳು ನೆಲಕಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಆನೆ ದಾಳಿಗೆ ಬಲಿಯಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ದೊಡ್ಡ ದೊಡ್ಡ ಪ್ಲಾನ್ ಮಾಡಿ ಫೇಲ್ ಆಗಿರುವ ಸಮಯದಲ್ಲಿ ಸರ್ಕಾರ ಈಗ ಪುಟ್ಟದೊಂದು ವಿಶೇಷವಾದ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಆನೆಗಳ ಪುಟ್ಟ ಶತ್ರು ಜೇನುನೋಣಗಳ ಮೂಲಕ ಕಾಡಾನೆಯನ್ನು ಓಡಿಸುವ ತಂತ್ರಕ್ಕೆ ಈಗ ಕೇಂದ್ರ ಸರ್ಕಾರ ಕೈ ಹಾಕಿದೆ. ಈ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಎಂಬಂತೆ ಕೊಡಗು ಜಿಲ್ಲೆಯ ನಾಣಚ್ಚಿ ಗ್ರಾಮ ಹಾಗೂ ಕೆದಮುಳ್ಳೂರು ಗ್ರಾಮದಲ್ಲಿ ಜಾರಿಗೆ ತರಲಾಗಿದೆ.
ಕಾಡಾನೆಗಳಿಗೆ ಕಂಟಕವಾಗುತ್ತವೆಯೇ ಜೇನುನೊಣಗಳು? ಕಾಡಾನೆಗಳು ನಾಡಿಗೆ ನುಸುಳುವ ಜಾಗದಲ್ಲಿ ಜೇನುಪೆಟ್ಟಿಗೆಗಳನ್ನಿಟ್ಟು ಜೇನುನೊಣಗಳಿಂದ ದಾಳಿ ನಡೆಸಿ ಆನೆಗಳನ್ನು ಕಾಡಿಗೆ ಹೆಮ್ಮೆಟ್ಟಿಸುವ ಯೋಜನೆ ಇದಾಗಿದೆ. ದೊಡ್ಡ ದೊಡ್ಡ ಯೋಜನೆಗಳನ್ನ ಮಾಡಿ ಬಗೆಹರಿಯದ ಆನೆ ಸಮಸ್ಯೆ ಜೇನುನೊಣದಿಂದ ಸಾಧ್ಯವಾಗಲಿದೆ ಅನ್ನೋದು ಸರ್ಕಾರದ ನಂಬಿಕೆ. ನೊಣಕ್ಕೆ ಹೆದರಿ ಆನೆಗಳು ಓಡುವ ನಿರೀಕ್ಷೆಯಿದ್ದು, ಈ ಮೂಲಕ ಆನೆ-ಮಾನವ ಸಂಘರ್ಷ ತಪ್ಪಿಸುವುದರ ಜೊತೆಗೆ ರೈತರ ಆದಾಯ ಯಾವ ರೀತಿ ಹೆಚ್ಚಲಿದೆ ಎಂದು ಕಾದು ನೋಡಬೇಕಿದೆ.
ಈ ಯೋಜನೆಯನ್ನು ರೂ. 15 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ರಿ-ಹಾಬ್ ಪೈಲಟ್ ಯೋಜನೆಯಡಿ ಎರಡೂ ಗ್ರಾಮದ ಐದು ಜಾಗಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಡಲಾಗಿದೆ.