ಮಡಿಕೇರಿ (ಕೊಡಗು): ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ಮೃತಪಟ್ಟಿದ್ದ ನಾರಾಯಣ ಆಚಾರ್ ಮಕ್ಕಳಿಬ್ಬರೂ ಮತಾಂತರ ಹಿನ್ನೆಲೆ ಪರಿಹಾರ ಹಣವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಪರಿಹಾರ ಹಣದ ಹಂಚಿಕೆಗೆ ಅಡ್ಡಿ ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ್ ಅಚಾರ್ ಪುತ್ರಿಯರಿಬ್ಬರೂ ಹಿಂದೂ ಧರ್ಮವನ್ನು ತೊರೆದು ಅನ್ಯಧರ್ಮಗಳಿಗೆ ಮತಾಂತರವಾಗಿದ್ದಾರೆ. ಹೀಗಾಗಿ ಇಬ್ಬರ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಬೇರೆಯದ್ದೇ ಹೆಸರಿದೆ. ಆದ್ದರಿಂದ ಸೂಕ್ತವಾದ ದಾಖಲೆಗಳನ್ನು ಒದಗಿಸುವಂತೆ ಹೇಳಿದ್ದಾರೆ. ಅಲ್ಲದೇ ವಂಶವೃಕ್ಷದ ಸಮೇತ ಮಾಹಿತಿ ಒದಗಿಸುವಂತೆ ಹೇಳಿ ಭಾಗಮಂಡಲದ ನಾಡ ಕಚೇರಿಗೆ 5 ಲಕ್ಷ ಮೊತ್ತದ ಪರಿಹಾರ ಚೆಕ್ ಅನ್ನು ವಾಪಸ್ ಕಳುಹಿಸಲಾಗಿದೆ. ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಮೃತ ನಾರಾಯಣ ಆಚಾರ್ ಅವರ ಇಬ್ಬರು ಮಕ್ಕಳಿಗೆ ತಲಾ 2.50 ಲಕ್ಷ ಪರಿಹಾರ ನೀಡಿದ್ದರು.
ಆಗಸ್ಟ್ 5 ರಾತ್ರಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಸಾಲಿನ ಗಜಗಿರಿ ಬೆಟ್ಟ ಕುಸಿದು ಪ್ರಧಾನ ಅರ್ಚಕ ವೃತ್ತಿ ಮಾಡುತ್ತಿದ್ದ ನಾರಾಯಣ ಆಚಾರ್ ಹಾಗೂ ಇವರ ಪತ್ನಿ ಶಾಂತಾ ಆಚಾರ್ ಸಹೋದರ ಆನಂದತೀರ್ಥ ಸ್ವಾಮಿಜಿ ಸೇರಿದಂತೆ ಸಹಾಯಕ ಅರ್ಚಕರಾದ ರವಿಕಿರಣ್ ಮತ್ತು ಶ್ರೀನಿವಾಸ್ ಪಡಿಲಾಯ ಭೂ ಸಮಾಧಿಯಾಗಿದ್ದರು. ಹಲವು ದಿನಗಳ ಶೋಧದ ಬಳಿಕ ಶಾಂತಾ ಆಚಾರ್ ಹಾಗೆಯೇ ಶ್ರೀನಿವಾಸ್ ಮೃತ ದೇಹಗಳು ಹೊರತುಪಡಿಸಿ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ಆಸ್ಟ್ರೇಲಿಯಾ- ನ್ಯೂಜಿಲ್ಯಾಂಡ್ ದೇಶಗಳಲ್ಲಿ ನೆಲೆಸಿರುವ ನಾರಾಯಣ ಆಚಾರ್ ಮಕ್ಕಳು ವಿದೇಶದಿಂದ ಮರಳಿ, ಪೋಷಕರು ನಾಪತ್ತೆಯಾಗಿರುವ ಬಗ್ಗೆ ಭಾಂಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಕ್ಕೂ ಮೊದಲು ನಾರಾಯಣ ಆಚಾರ್ ಸಹೋದರಿ ಸುಶೀಲಾ ಅವರು ನಾಪತ್ತೆ ಆಗಿರುವ ಬಗ್ಗೆ ದೂರು ನೀಡಿದ್ದರು.
ದೂರು ನೀಡುವ ಸಂದರ್ಭ ಪುತ್ರಿಯರು ಶಾರದ ಅಚಾರ್ ಮತ್ತು ನಮಿತಾ ಅಚಾರ್ ಎಂದು ತಮ್ಮ ಹೆಸರು ಉಲ್ಲೇಖ ಮಾಡಿದ್ದರು. ಅದರ ಆಧಾರದ ಮೇಲೆ ರಾಜ್ಯ ಸರ್ಕಾರ ಪರಿಹಾರ ಹಣವನ್ನು ನಮಿತಾ ಆಚಾರ್ ಶಾರದಾ ಅಚಾರ್ ಎಂದು ಹೆಸರು ಉಲ್ಲೇಖಿಸಿ ಪರಿಹಾರ ಹಣವನ್ನು ಹಂಚಿದ್ದರು. ಚೆಕ್ ವಿತರಿಸಿದ ಬಳಿಕ ಆನಂದ ತೀರ್ಥ ಸ್ವಾಮೀಜಿ ನಮ್ಮ ಮನೆಯಲ್ಲೇ ಇದ್ದುದರಿಂದ ಅವರಿಗೆ ಕೊಟ್ಟಿರುವ 5 ಲಕ್ಷ ಹಣವೂ ನಮಗೂ ಸೇರಬೇಕು ಎಂದು ನಾರಾಯಣ ಆಚಾರ್ ಮಕ್ಕಳು ತಕರಾರು ತೆಗೆದಿದ್ದರು.