ಕರ್ನಾಟಕ

karnataka

By

Published : Mar 24, 2021, 8:48 PM IST

ETV Bharat / state

ಕೊಡಗು ಒಂಟಿ ಮಹಿಳೆಯ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ಆರೋಪಿ ಅಂದರ್​​​

ಒಂದು ತಿಂಗಳ ಹಿಂದೆ ಮಡಿಕೇರಿ ಸಮೀಪದ ಗ್ರಾಮವೊಂದರಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Murder accused arrested at Kodagu
ಮಡಿಕೇರಿ ಮಹಿಳೆಯ ಕೊಲೆ ಆರೋಪಿಯ ಬಂಧನ

ಕೊಡಗು:ಜಿಲ್ಲೆಯ ಮಡಿಕೇರಿ ಸಮೀಪದ ಕೆ.ನಿಡುಗಣಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಒಂದು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

ಫೆಬ್ರವರಿ 22ರಂದು ಕೆ.ನಿಡುಗಣಿ ಗ್ರಾಮದ ಲಲಿತಾ (65) ಎಂಬ ಮಹಿಳೆಯ ಕೊಲೆಯಾಗಿತ್ತು. ಕೊಲೆ ಮಾಡಿದ ಬಳಿಕ ಆರೋಪಿ ಸ್ಥಳದಲ್ಲಿ ಒಂದು ಕುರುಹು ಬಿಡದಂತೆ ಎಸ್ಕೇಪ್ ಆಗಿದ್ದ. ಹೀಗಾಗಿ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೂ ಸವಾಲಾಗಿತ್ತು. ಆದರೆ ಪೊಲೀಸರು ಕೃತ್ಯ ನಡೆದ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲೇ ಮದ್ಯದ ಬಾಟಲ್ ಒಂದು ಸಿಕ್ಕಿತ್ತು. ಇದರ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರು, ಮಂಗಳೂರು ಮೂಲದ ಆರೋಪಿ ಅನಿಲ್ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ.

ಮಡಿಕೇರಿ ಮಹಿಳೆಯ ಕೊಲೆ ಪ್ರಕರಣ: ಆರೋಪಿಯ ಬಂಧನ

ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಅನಿಲ್​, ಕೊಲೆಯಾದ ಲಲಿತಾ ಮನೆಯ ಸಮೀಪವೇ ಇದ್ದ ಖಾಸಗಿ ರೆಸಾರ್ಟ್​ ಒಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ಈತ ಹಲವಾರು ಕಡೆ ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಯಾವುದಾದರೂ ದಾರಿ ಹುಡುಕುತ್ತಿದ್ದ. ಅಷ್ಟೊತ್ತಿಗೆ ಮನೆಯಲ್ಲಿ ಒಂಟಿಯಾಗಿದ್ದ ಲಲಿತಾ ಈತನ ಕಣ್ಣಿಗೆ ಬಿದ್ದಿದ್ದರು. ಲಲಿತಾಗೆ ಮೂವರು ಮಕ್ಕಳಿದ್ದು, ಅವರೆಲ್ಲ ದೂರದೂರಿನಲ್ಲಿ ಇದ್ದರು. ಲಲಿತಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹೀಗಾಗಿ, ತನ್ನ ಸಾಲ ತೀರಿಸಲು ಲಲಿತಾ ಮನೆಯನ್ನು ದರೋಡೆ ಮಾಡಲು ಅನಿಲ್ ಸಂಚು ರೂಪಿಸಿದ್ದ. ಯಾರೂ ಇಲ್ಲದ ಸಮಯದಲ್ಲಿ ಸಮೀಪದ ತೋಟದಲ್ಲಿ ಕೂತು ಲಲಿತಾಳ ಚಲನವನಗಳನ್ನು ಗಮನಿಸುತ್ತಿದ್ದ. ಹೀಗೆ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದ ಅನಿಲ್, ಫೆ. 22ರಂದು ಲಲಿತಾ ನೀರು ಕಾಯಿಸಲು ಮನೆಯಿಂದ ಹೊರ ಬಂದಾಗ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಅಲ್ಲದೆ, ಮನೆಯಲ್ಲಿದ್ದ ಹಣ, ಚಿನ್ನಾಭರಣ ಮತ್ತು ಮದ್ಯದ ಬಾಟಲಿಗಳನ್ನು ಹೊತ್ತೊಯ್ದಿದ್ದ.

ಓದಿ : ಉಂಡ ಮನೆಗೆ ಕನ್ನ ಹಾಕಿದ ಮಹಿಳೆ: ಸಾಥ್ ನೀಡಿದವನನ್ನೂ ಬಂಧಿಸಿದ ಪೊಲೀಸರು

ದೂರದೂರಿನಲ್ಲಿರುವ ಲಲಿತಾರ ಮಕ್ಕಳು ತಾಯಿಗೆ ಎಷ್ಟೇ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನ ಬಂದು ಪಕ್ಕದ ಮನೆಯವರ ಮೂಲಕ ವಿಚಾರಿಸಿದಾಗ ಕೊಲೆಯಾದ ವಿಚಾರ ಬೆಳಕಿಗೆ ಬಂದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯವನಾದ ಅನಿಲ್, ಕೃತ್ಯದ ಬಳಿಕ ಊರಿಗೆ ತೆರಳಿದ್ದ. ಆದರೆ ಆತ ಲಲಿತಾ ಮನೆಯಿಂದ ಹೊತ್ತೊಯ್ದ ಮದ್ಯದ ಬಾಟಲಿಯ ಜಾಡು ಹಿಡಿದ ಪೊಲೀಸರು, ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಸಾಲ ತೀರಿಸುವ ಸಲುವಾಗಿ ಲಲಿತಾ ಮನೆಯಿಂದ ಹಣ, ಚಿನ್ನಾಭರಣ ದೋಚಲು ಕೃತ್ಯ ನಡೆಸಿರುವುದಾಗಿ ಅನಿಲ್ ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಲಲಿತಾ ಮನೆಯಿಂದ ದೋಚಿದ್ದ 50 ಸಾವಿರ ಹಣದ ಪೈಕಿ 4 ಸಾವಿರ, ಚಿನ್ನ, ಬೈಕ್ ಮತ್ತು ಕೊಲೆ ಮಾಡಲು ಬಳಸಿದ ರಾಡ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details