ಕೊಡಗು: ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ 22 ದಿನಗಳಾದರೂ ತೋರಾದ ಹರೀಶ್ ಮತ್ತು ಪ್ರಭು ಕುಟುಂಬದ ನಾಲ್ವರು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ಚಿಂತನೆ ನಡೆಸಲಾಗಿದೆ.
ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ಹರೀಶ್, ಪ್ರಭು ಕುಟುಂಬ ಸಮ್ಮತಿ ನೀಡಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ವರದಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ತಾತ್ಕಾಲಿಕವಾಗಿ ಶೋಧ ಕಾರ್ಯ ನಿಲ್ಲಿಸುವಂತೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಕಣ್ಮರೆಯಾದವರ ಶೋಧ ಕಾರ್ಯ ತಾತ್ಕಾಲಿಕ ಸ್ಥಗಿತಕ್ಕೆ ಚಿಂತನೆ ಎನ್‌ಡಿಆರ್‌ಎಫ್, ಗರುಡ, ಪೊಲೀಸ್, ಸ್ಥಳೀಯರು ಸೇರಿದಂತೆ 120 ಮಂದಿ ಸಿಬ್ಬಂದಿ, 6 ಹಿಟಾಚಿಗಳಿಂದ ನಿರಂತರವಾಗಿ ಘಟನಾ ಸ್ಥಳದಲ್ಲಿ ಕಣ್ಮರೆ ಆದವರ ಪತ್ತೆಗೆ ಹುಡುಕಾಟ ನಡೆಸಲಾಗಿತ್ತು. ಕಾರ್ಯಾಚರಣೆ ವೇಳೆ ಮಣ್ಣು ತೆರವಿಗೆ ಹೆಚ್ಚಿದ ನೀರು ಅಡ್ಡಿ ಹಿನ್ನೆಲೆ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಲು ಚಿಂತಿಸಲಾಗಿದೆ.
ಈಗಾಗಲೇ ಪ್ರಭು, ಹರೀಶ್ ಕುಟುಂಬಕ್ಕೆ ತಲಾ 1 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಜಿಲ್ಲಾಡಳಿತ ನೀಡಿದೆ. ಉಳಿದ 4 ಲಕ್ಷವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಿಎಂ ಫಂಡ್‌ನಿಂದ ನೀಡುವಂತೆ ಮನವಿ ಮಾಡಿದೆ. ರಾಜ್ಯ ಸರ್ಕಾರ ಸಮ್ಮತಿ ನೀಡಿದರೆ ತಕ್ಷಣ ಶೋಧ ಕಾರ್ಯಾಚರಣೆ ಸ್ಥಗಿತವಾಗಲಿದೆ.