ಕೊಡಗು:ಬೆಂಗಳೂರಿನ ಬಹುತೇಕ ಕಾಲೇಜು, ಗೂಡಂಗಡಿಗಳು ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಅದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ನಟ ಜೈ ಜಗದೀಶ್ ಪ್ರಶ್ನಿಸಿದರು.
ಡ್ರಗ್ಸ್ ಎನ್ನುವುದು ಎಲ್ಲೆಡೆ ಇದ್ದರೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ಹಾಟ್ ನ್ಯೂಸ್ ಆಗಿದೆ. ಕೊರೊನಾ ಹಾಗೂ ಡ್ರಗ್ಸ್ ವಿಚಾರಗಳಿಗಷ್ಟೇ ಏಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈವರೆಗೂ ಕನ್ನಡ ಚಿತ್ರರಂಗದಲ್ಲೇ ಇಂತಹ ಸಂಗತಿಗಳು ಪ್ರಸ್ತುತದಲ್ಲಿ ಮುನ್ನೆಲೆಗೆ ಬರುತ್ತಿರುವುದು ಬೇಸರದ ಸಂಗತಿ ಎಂದರು.
ಸಂಜನಾ ಹಾಗೂ ರಾಗಿಣಿ ಇಬ್ಬರೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ. ಉತ್ತರ ಭಾರತದಿಂದ ಬಂದಂತಹ ಇಬ್ಬರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಆದಷ್ಟು ಬೇಗನೇ ಕಾನೂನು ರೀತಿಯಲ್ಲಿ ತನಿಖೆ ನಡೆಸಬೇಕು. ಬಂಧಿತರಿಗೆ ಜಾಮೀನು ಸಿಗಬೇಕು. ಅವರು ದೋಷದಿಂದ ಮುಕ್ತರಾಗಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ದೇಶಾದ್ಯಂತ ವ್ಯಾಪಿಸಿದೆ. ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಬಳಕೆ ಆಗುತ್ತಿತ್ತು. ಇಂದು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಈ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಏಕೆ ಮೌನವಹಿಸಿದೆ. ದೇಶಕ್ಕೆ ಡ್ರಗ್ಸ್ ಹೇಗೆ ಬಂತು? ಪೆಡ್ಲರ್‌ಗಳು ಹೇಗೆ ಹುಟ್ಟಿಕೊಂಡರು? ಇದನ್ನು ಮೊದಲು ಪತ್ತೆ ಹಚ್ಚಲಿ ಎಂದು ಹಿರಿಯ ನಟ ಆಗ್ರಹಿಸಿದರು.